Tuesday, July 5, 2022

Latest Posts

ಶುಂಠಿ ಚೀಲಗಳ ಅಡಿಯಲ್ಲಿ ಬೀಟೆ ಮರ ಸಾಗಾಟ: ಆರೋಪಿಗಳು ಪರಾರಿ

ಹೊಸದಿಗಂತ ವರದಿ, ಕೊಡಗು:

ಲಾರಿಯಲ್ಲಿ ಶುಂಠಿ ಚೀಲಗಳ ಅಡಿಯಲ್ಲಿ ಅಕ್ರಮವಾಗಿ ಬೀಟೆ ಮರದ ತುಂಡುಗಳನ್ನು ಸಾಗಿಸುತ್ತಿದ್ದ ಪ್ರಕರಣವನ್ನು ಮಡಿಕೇರಿ ಉಪ ವಲಯದ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪತ್ತೆ ಹಚ್ಚಿದ್ದು, ಅಂದಾಜು 10 ಲಕ್ಷ ರೂ. ಮೌಲ್ಯದ ಸ್ವತ್ತನ್ನು ವಶಕ್ಕೆ ಪಡಿಸಿಕೊಂಡಿದ್ದಾರೆ. ಲಾರಿಯಲ್ಲಿದ್ದ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.
ಮೂರ್ನಾಡು ಮಾರ್ಗವಾಗಿ ಲಾರಿಯಲ್ಲಿ ಭಾರೀ ಪ್ರಮಾಣದ ಬೀಟೆ ಮರವನ್ನು ಸಾಗಿಸುತ್ತಿರುವ ಖಚಿತ ಮಾಹಿತಿ ಮಡಿಕೇರಿ ಉಪ ವಲಯದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಲಭಿಸಿತ್ತು.
ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮಡಿಕೇರಿ-ಮೂರ್ನಾಡು-ನಾಪೋಕ್ಲು ಮಾರ್ಗದಲ್ಲಿ ಗಸ್ತು ನಡೆಸುತ್ತಿದ್ದರು. ಅದರಂತೆ ಮಡಿಕೇರಿ- ಮೈಸೂರು ರಸ್ತೆಯ ಸ್ಯಾಂಡಲ್‌ಕಾಡ್ ಬಳಿ ಬರುತ್ತಿದ್ದ 10 ಚಕ್ರದ ಲಾರಿಯನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಅಡ್ಡಗಟ್ಟಿದ್ದು, ಈ ಸಂದರ್ಭ ಲಾರಿ ಚಾಲಕ ಹಾಗೂ ಮತ್ತೊಬ್ಬ ಲಾರಿಯಿಂದ ಜಿಗಿದು ಪರಾರಿಯಾಗಿದ್ದಾರೆ.
ಬಳಿಕ ಲಾರಿಯನ್ನು ಪರಿಶೀಲಿಸಿದಾಗ ಮೇಲ್ಭಾಗದಲ್ಲಿ ಶುಂಠಿ ತುಂಬಿದ ಚೀಲ, ಅದರ ಕೆಳಭಾಗ ಮರದ ಹೊಟ್ಟು ತುಂಬಿದ ಚೀಲವನ್ನು ಅಳವಡಿಸಿರುವುದು ಗೋಚರಿಸಿದೆ. ಈ ಚೀಲಗಳನ್ನು ಸರಿಸಿದ ಸಂದರ್ಭ ಕೆಳ ಭಾಗದಲ್ಲಿ ಭಾರೀ ಗಾತ್ರದ ಬೀಟೆ ಮರದ 34 ತುಂಡುಗಳನ್ನು ತುಂಬಿರುವುದು ಕಂಡು ಬಂದಿದೆ. ಸ್ಥಳದಲ್ಲೇ ಮರ ಸಹಿತ ಲಾರಿಯನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದಿದ್ದು, ಆರೋಪಿಗಳ ಪತ್ತೆಗಾಗಿ ತನಿಖೆ ನಡೆಸಲಾಗುತ್ತಿದೆ.
ಡಿಸಿಎಫ್ ಪೂವಯ್ಯ ಮಾರ್ಗದರ್ಶನದಲ್ಲಿ ಎಸಿಎಫ್ ದಯಾನಂದ, ಆರ್‌ಎಫ್‌ಓ ಮಧುಸೂದನ್, ಡಿಆರ್‌ಎಫ್‌ಓ ಬಾಬು ರಾಥೋಡ್, ಮಲ್ಲಯ್ಯ, ಉಮೇಶ್, ಅರಣ್ಯ ರಕ್ಷಕರಾದ ಭವ್ಯಾ, ಸಂದೇಶ್, ವಾಸು, ತಿಮ್ಮಯ್ಯ, ಮೋಹನ್ ಅವರುಗಳು ಕಾರ್ಯಾಚರಣೆ ನಡೆಸಿದ್ದರು.
ಲಾರಿ ಸಹಿತ ವಶಕ್ಕೆ ಪಡೆಯಲಾದ ಒಟ್ಟು ಸ್ವತ್ತಿನ ಮೌಲ್ಯ ಅಂದಾಜು 10 ಲಕ್ಷ ರೂ.ಗಳಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಡಿಸಿಎಫ್ ಪೂವಯ್ಯ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss