ರೈಲ್ವೆ ಪ್ರಯಾಣಿಕರೇ ಕಾಯ್ದಿರಿಸಿದ ಟಿಕೆಟ್ ಕ್ಯಾನ್ಸಲ್ ಮಾಡುವ ಮುನ್ನ ಗಮನಿಸಿ: ಇನ್ಮುಂದೆ ರದ್ದತಿಗೂ ಬೀಳುತ್ತೆ GST!

ಹೊಸದಿಗಂತ ಡಿಜಿಟಲ್‌ ಡೆಸ್ಕ್

ಇನ್ಮುಂದೆ ಕಾಯ್ದಿರಿಸಿರುವ ರೈಲ್ವೆ ಟಿಕೆಟ್ ಗಳನ್ನು ರದ್ದುಗೊಳಿಸಿದ್ರೆ ಜೇಬಿಗೆ ಬರೆ ಬೀಳಲಿದೆ.

ಹೌದು, ಆ.3ರಂದು ಹೊರಡಿಸಿರುವ ಹಣಕಾಸು ಸಚಿವಾಲಯದ ಸುತ್ತೋಲೆ ಪ್ರಕಾರ ಖಚಿತಪಡಿಸಿದ ರೈಲ್ವೆ ಟಿಕೆಟ್ ಗಳ ರದ್ದತಿ ಇನ್ಮುಂದೆ ದುಬಾರಿಯಾಗಲಿದೆ. ಇದರ ಮೇಲೆ ಸರಕು ಹಾಗೂ ಸೇವಾ ತೆರಿಗೆ (GST)ವಿಧಿಸಲಾಗುತ್ತದೆ.

ಹಣಕಾಸು ಸಚಿವಾಲಯದ ತೆರಿಗೆ ಸಂಶೋಧನೆ ಘಟಕದ ಅಧಿಸೂಚನೆ ಪ್ರಕಾರ ಟಿಕೆಟ್ ಗಳ ಬುಕ್ಕಿಂಗ್ ಒಂದು ಒಪ್ಪಂದವಾಗಿದೆ. ಇದರಡಿಯಲ್ಲಿ ಸೇವಾ ಪೂರೈಕೆದಾರರು (ಐಆರ್ ಸಿಟಿಸಿ/ಭಾರತೀಯ ರೈಲ್ವೆ) ಗ್ರಾಹಕರಿಗೆ ಸೇವೆಗಳನ್ನು ಒದಗಿಸುವ ಭರವಸೆ ನೀಡಿರುತ್ತಾರೆ.

ಫಸ್ಟ್ ಕ್ಲಾಸ್ ಅಥವಾ ಎಸಿ ಕೋಚ್ ಟಿಕೆಟ್ ರದ್ದತಿ ಶುಲ್ಕ ಶೇ.5ರಷ್ಟು ಜಿಎಸ್ ಟಿ ಆಕರ್ಷಿಸುತ್ತದೆ. ಅದೇ ಮಾದರಿಯಲ್ಲಿ ವಿಮಾನಯಾನ ಅಥವಾ ಹೋಟೆಲ್ ವಾಸ್ತವ್ಯದ ಬುಕ್ಕಿಂಗ್ ರದ್ದುಗೊಳಿಸಿದ್ರೆ ಕೂಡ ರದ್ದತಿ ಶುಲ್ಕದ ಮೇಲೆ ಕೂಡ ಅಷ್ಟೇ ಮೊತ್ತದ ಜಿಎಸ್ ಟಿ ಅನ್ವಯಿಸುತ್ತದೆ.

‘ಪ್ರಯಾಣಿಕ ಒಪ್ಪಂದ ಮುರಿದಾಗ ಸೇವಾದಾತರಿಗೆ ಪರಿಹಾರದ ರೂಪದಲ್ಲಿ ಸಣ್ಣ ಮೊತ್ತವನ್ನು ಪಾವತಿಸಲಾಗುತ್ತದೆ. ಇದನ್ನು ರದ್ದತಿ ಶುಲ್ಕದ ರೂಪದಲ್ಲಿ ಸಂಗ್ರಹಿಸಲಾಗುತ್ತದೆ. ರದ್ದತಿ ಶುಲ್ಕ ಪಾವತಿಯಾದ ಕಾರಣ ಇದಕ್ಕೆ ಜಿಎಸ್ ಟಿ (GST) ಅನ್ವಯಿಸುತ್ತದೆ’ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ರೈಲ್ವೆಯ ಪ್ರಥಮ ದರ್ಜೆ ಹಾಗೂ ಎಸಿ ಕೋಚ್ ಟಿಕೆಟ್ ಗೆ ಮಾತ್ರ ಶೇ.5 ಜಿಎಸ್ ಟಿ ವಿಧಿಸಲಾಗುತ್ತದೆ. ಇದು ದ್ವಿತೀಯ ಸ್ಲೀಪರ್ ದರ್ಜೆಗೆ ಅನ್ವಯಿಸೋದಿಲ್ಲ.

ಒಂದು ವೇಳೆ ಯಾರಾದ್ರೂ ಪ್ರಥಮ ದರ್ಜೆ ಅಥವಾ ಎಸಿ ಕೋಚ್ ಟಿಕೆಟ್ ರದ್ದುಗೊಳಿಸಿದ್ರೆ ಅದಕ್ಕೆ 240ರೂ. ಶುಲ್ಕ ಬೀಳಲಿದೆ. ಇದಕ್ಕೆ ಶೇ.5ರಷ್ಟು ಜಿಎಸ್ ಟಿ ವಿಧಿಸಿದಾಗ 252ರೂ. ಪಾವತಿಸಬೇಕಾಗುತ್ತದೆ. ರೈಲಿನ ನಿಗದಿತ ನಿರ್ಗಮನಕ್ಕಿಂತ 48 ಗಂಟೆಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿ ಮೊದಲು ಟಿಕೆಟ್ ರದ್ದುಗೊಳಿಸಿದ್ರೆ ಭಾರತೀಯ ರೈಲ್ವೆ 240ರೂ. ಶುಲ್ಕ ವಿಧಿಸುತ್ತದೆ. ಒಂದು ವೇಳೆ ಟಿಕೆಟ್ ಅನ್ನು ರೈಲಿನ ನಿರ್ಗಮನ ಸಮಯಕ್ಕಿಂತ 12 ಅಥವಾ 48ಗಂಟೆಗಳಿಗಿಂತ ಮುನ್ನ ಕ್ಯಾನ್ಸಲ್ ಮಾಡಿದ್ರೆ ಟಿಕೆಟ್ ಮೊತ್ತದ ಶೇ.25 ರಷ್ಟನ್ನು ರದ್ದತಿ ಶುಲ್ಕವಾಗಿ ಪಾವತಿಸಬೇಕಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!