ಚಿಂಚೋಳಿಯಲ್ಲಿ ಅರಣ್ಯ ಕಾಲೇಜು ಸ್ಥಾಪನೆಗೆ ಉಮೇಶ್‌ ಕತ್ತಿ ಪಣ

ಹೊಸದಿಗಂತ ವರದಿ ಕಲಬುರಗಿ: 

ಪ್ರಸ್ತುತ‌ ರಾಜ್ಯದ ದಕ್ಷಿಣ ಭಾಗದಲ್ಲಿ ಶಿರಸಿ ಮತ್ತು ಮೈಸೂರಿನಲ್ಲಿ ಅರಣ್ಯ ಕಾಲೇಜಿದ್ದು, ಉತ್ತರ ಭಾಗದಲ್ಲಿಲ್ಲ. ಹೀಗಾಗಿ ಸಂಪುಟದ‌ ಒಪ್ಪಿಗೆ ಪಡೆದು ವರ್ಷದೊಳಗೆ ಚಿಂಚೋಳಿಯಲ್ಲಿ ಅರಣ್ಯ ಕಾಲೇಜು ಸ್ಥಾಪಿಸಲಾಗುವುದು ಎಂದು ರಾಜ್ಯದ ಅರಣ್ಯ‌ ಮತ್ತು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ‌ ವ್ಯವಹಾರಗಳ ಖಾತೆ ಸಚಿವ‌ ಉಮೇಶ‌ ವಿ. ಕತ್ತಿ ಹೇಳಿದರು.

ಸೋಮವಾರ ಚಿಂಚೋಳಿ ತಾಲೂಕಿನ ಪೋಲಕಪಳ್ಳಿಯಲ್ಲಿ ಅರಣ್ಯ ಇಲಾಖೆಯಿಂದ 8 ಎಕರೆ ವಿಶಾಲ ಪ್ರದೇಶದಲ್ಲಿ‌ 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಸಾಲುಮರದ‌ ತಿಮ್ಮಕ್ಕನ‌ ವೃಕ್ಷೋದ್ಯಾನ ಲೋಕಾರ್ಪಣೆಗೊಳಿಸಿ‌ ಮಾತನಾಡಿದರು. ಚಿಂಚೋಳಿಯಲ್ಲಿ ಕಾಲೇಜು ಸ್ಥಾಪನೆಗೆ ಅನೇಕ ವರ್ಷದಿಂದ ಬೇಡಿಕೆಯಿದ್ದು, ಕೃಷಿ ಸಚಿವ ಬಿ.ಸಿ.ಪಾಟೀಲ ಅವರೊಂದಿಗೆ ಚರ್ಚಿಸಿ ಶೀಘ್ರ ಆರಂಭಿಸಲಾಗುವುದು. ಇದರಿಂದ ಈ ಭಾಗದಲ್ಲಿ ಅರಣ್ಯ ಕಾಳಜಿ ಹೆಚ್ಚಲಿದೆ ಜೊತೆಗೆ ಈ ಭಾಗದಿಂದಲೂ ಅರಣ್ಯ ಅಧಿಕಾರಿಗಳು ಹೊರಬರಲು ಸಹಾಯವಾಗುತ್ತದೆ ಎಂದರು.

ಕಲ್ಯಾಣ ಕರ್ನಾಟಕದ ಮಳೆನಾಡೆಂದೇ ಕರೆಸಿಕೊಳ್ಳುವ ಚಿಂಚೋಳಿ ಒಳಗೊಂಡ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು ಜಿಲ್ಲೆಯಲ್ಲಿ ಅರಣ್ಯೀಕರಣಕ್ಕೆ ಹೆಚ್ಚಿನ ಒತ್ತು ನೀಡಿ ಪ್ರದೇಶವನ್ನು ಮಳೆನಾಡನ್ನಾಗಿ ಪರಿವರ್ತಿಸಲಾಗುವುದು. ಪರಿಸರ, ಅರಣ್ಯ ಸಂರಕ್ಷಿಸಿದ್ದರೆ ಮಾತ್ರ ಉತ್ತಮ ಮಳೆ-ಬೆಳೆ ಜೊತೆಗೆ ನಾವು-ನೀವೆಲ್ಲ ಜೀವನ ಸಾಗಿಸಬಹುದು ಎಂದರು.

2 ಕೋಟಿ ರೂ. ವೆಚ್ಚದ ಕಾಟೇಜ್‌ ನಿರ್ಮಾಣಕ್ಕೆ ಸಿದ್ಧತೆ

ಪ್ರಕೃತಿ ಸೌಂದರ್ಯದಿಂದ‌ ಪ್ರವಾಸಿಗರನ್ನು ಆಕರ್ಷಿಸುವ ಚಿಂಚೋಳಿ ತಾಲೂಕಿನ ಚಂದ್ರಂಪಳ್ಳಿ ಜಲಾಶಯ ಬಳಿ ಪ್ರವಾಸಿಗರು ತಂಗಲು ಕಾಟೇಜ್ ನಿರ್ಮಾಣಕ್ಕೆ 2 ಕೋಟಿ ರೂ. ಕರ್ನಾಟಕ ಜಂಗಲ್ ಲಾಡ್ಜಸ್ ಹಾಗೂ ರೆಸಾರ್ಟ್ ನಿಗಮಕ್ಕೆ ಬಿಡುಗಡೆಗೊಳಿಸಿದ್ದು, ತಿಂಗಳಾಂತ್ಯದಲ್ಲಿ ಇದಕ್ಕೆ ಅಡಿಗಲ್ಲು ಹಾಕಲಾಗುವುದು ಎಂದರು. ಈ ಸಂದರ್ಭದಲ್ಲಿ ಸಂಸದ ಭಗವಂತ ಖೂಬಾ, ಶಾಸಕ ರಾಜಕುಮಾರ್ ಪಾಟೀಲ್, ಅವಿನಾಶ್ ಜಾಧವ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!