ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ಆನ್ ಲೈನ್ ಡೆಸ್ಕ್:
ಲಸಿಕೆಯ ದಾಸ್ತಾನು, ಸಂಗ್ರಹಕ್ಕಾಗಿ ನಿಗದಿ ಮಾಡಿರುವ ತಾಪಮಾನ ಕುರಿತ ಮಾಹಿತಿಯನ್ನು ಇತರ ಸಂಸ್ಥೆಗಳೊಂದಿಗೆ ಹಂಚಿಕೊಳ್ಳುವ ಮುನ್ನ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಅನುಮತಿ ಪಡೆಯಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ಸೂಚಿಸಿದೆ.
ಮಾಹಿತಿಯ ದುರ್ಬಳಕೆಯನ್ನು ತಡೆಗಟ್ಟುವ ಸಲುವಾಗಿ ಈ ಕ್ರಮ ಅಗತ್ಯ ಎಂದೂ ಸಚಿವಾಲಯ ಪ್ರತಿಪಾದಿಸಿದೆ.
ಎಲೆಕ್ಟ್ರಾನಿಕ್ ವ್ಯಾಕ್ಸಿನ್ ಇಂಟೆಲಿಜೆನ್ಸ್ ನೆಟ್ವರ್ಕ್’ (ಇ-ವಿನ್)ನಲ್ಲಿನ ಮಾಹಿತಿಯನ್ನು ಹಂಚಿಕೊಳ್ಳದಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ ಎಂಬ ವರದಿ ಹಿನ್ನೆಲೆಯಲ್ಲಿ ಸಚಿವಾಲಯ ಈ ಸೂಚನೆ ನೀಡಿದ್ದು, ಲಸಿಕೆ ಕುರಿತ ಮಾಹಿತಿ ಬಹಳ ಸೂಕ್ಷ್ಮವಾದದ್ದು. ಲಸಿಕೆ ಕಾರ್ಯಕ್ರಮದ ಸುಧಾರಣೆಗೆ ಮಾತ್ರ ಈ ಮಾಹಿತಿಯನ್ನು ಬಳಸಿಕೊಳ್ಳಬೇಕು. ಆದರೆ, ಕೆಲವು ಸಂಸ್ಥೆಗಳು ಈ ಮಾಹಿತಿಯನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಮಾಹಿತಿ ಹಂಚಿಕೆಗೂ ಮುನ್ನ ಅನುಮತಿ ಪಡೆಯುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ’ ಎಂದು ಸಚಿವಾಲಯ ತಿಳಿಸಿದೆ.