ಹಿಜಾಬ್ ವಿವಾದದ ಹಿಂದೆ ಮತೀಯ ಸಂಘಟನೆಗಳ ಕೈವಾಡ : ಹಿಂಜಾವೇ ಆರೋಪ

ಹೊಸದಿಗಂತ ವರದಿ, ಮಡಿಕೇರಿ:

ಕೇವಲ 6 ಮಂದಿ ವಿದ್ಯಾರ್ಥಿನಿಯರಿಂದ ಆರಂಭವಾದ ಹಿಜಾಬ್ ವಿವಾದ ಇಡೀ ರಾಜ್ಯಕ್ಕೆ ಹಬ್ಬಿದ್ದು, ಇದರ ಹಿಂದೆ ಮತೀಯ ಸಂಘಟನೆಗಳ ಕೈವಾಡವಿದೆ ಎಂದು ಆರೋಪಿಸಿರುವ ಹಿಂದೂ ಜಾಗರಣಾ ವೇದಿಕೆಯ ಕೊಡಗು ಜಿಲ್ಲಾ ಘಟಕ ಅಂತಹ ಸಂಘಟನೆಗಳ ಮುಖಂಡರನ್ನು ಬಂಧಿಸಿ ವಿಚಾರಣೆ ನಡೆಸಬೇಕೆಂದು ಆಗ್ರಹಿಸಿದೆ.
ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಕ್ಕೇರ ಅಜಿತ್, ಶಾಲಾ ಕಾಲೇಜುಗಳ ಆಡಳಿತ ಮಂಡಳಿಗಳು ಸಮವಸ್ತ್ರ ಕಡ್ಡಾಯ ಮಾಡಿವೆ. ಕೋರ್ಟ್ ಕೂಡಾ ಸಮವಸ್ತ್ರ ಪಾಲಿಸುವಂತೆ ಮಧ್ಯಂತರ ಆದೇಶ ನೀಡಿದೆ. ಹೀಗಿದ್ದರೂ ವಿದ್ಯಾರ್ಥಿಗಳು ಹಿಜಾಬ್ ಧರಿಸಿಯೇ ಶಾಲಾ ಕಾಲೇಜುಗಳಿಗೆ ಆಗಮಿಸುವ ಮೂಲಕ ಕೋರ್ಟ್ ಆದೇಶವನ್ನು ಉಲ್ಲಂಘಿಸುತ್ತಿದ್ದಾರೆ. ಕಾಲೇಜು ಗೇಟ್‍ಗಳನ್ನು ಬಂದ್ ಮಾಡಿ ಪ್ರತಿಭಟಿಸುವ ಮೂಲಕ ಶಿಕ್ಷಣಕ್ಕಾಗಿ ಕಾಲೇಜಿಗೆ ಬರುವ ಇತರ ವಿದ್ಯಾರ್ಥಿಗಳಿಗೂ ತೊಂದರೆ ನಿಡುತ್ತಿದ್ದಾರೆ ಎಂದು ಆರೋಪಿಸಿದರು.
ಆರು ಮಂದಿ ವಿದ್ಯಾರ್ಥಿನಿಯರಿಂದ ಆರಂಭವಾದ ಹಿಜಾಬ್ ಪ್ರಕರಣ ಇಡೀ ರಾಜ್ಯಕ್ಕೆ ಹರಡಿದೆ. ಕೋರ್ಟ್ ಆದೇಶ ಪಾಲಿಸದೇ ಪ್ರತಿಭಟನೆ ನಡೆಸಲು ಕೆಲವು ಸಂಘಟನೆಗಳು ವಿದ್ಯಾರ್ಥಿಗಳನ್ನು ಪ್ರೇರೇಪಿಸುತ್ತಿವೆ. ಪಿ.ಎಫ್.ಐ, ಎಸ್.ಡಿ.ಪಿ.ಐ, ಸಿಎಫ್‍ಐ ಮತ್ತಿತರ ಸಂಘಟನೆಗಳ ಮುಖಂಡರನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿದರೆ ಪ್ರಕರಣದ ಹಿಂದಿರುವ ಕಾಣದ ಕೈಗಳು ಬೆಳಕಿಗೆ ಬರುತ್ತವೆ ಎಂದರು.
ಈ ಕುರಿತು ಕೇಂದ್ರ, ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ದೇಶದ ಪ್ರತಿಯೊಬ್ಬರೂ ಸಂವಿಧಾನವನ್ನು ಗೌರವಿಸಬೇಕು. ಆದರೆ ಒಂದು ಕೋಮಿನ ವಿದ್ಯಾರ್ಥಿಗಳು ಅದನ್ನು ಉಲ್ಲಂಘಿಸುತ್ತಿದ್ದಾರೆ. ಶಾಲಾ ಕಾಲೇಜುಗಳ ಶೈಕ್ಷಣಿಕ ವಾತಾವರಣವನ್ನು ಹಾಳು ಮಾಡಲು ಮುಂದಾಗುತ್ತಿದ್ದಾರೆ. ಹಿಜಾಬ್ ಧರಿಸಿ ತರಗತಿಗೆ ಬಾರದಂತೆ ಮಡಿಕೇರಿಯ ಸರಕಾರಿ ಪದವಿ ಪೂರ್ವ ಕಾಲೇಜೊಂದರ ಪ್ರಾಂಶುಪಾಲರು ವಿದ್ಯಾರ್ಥಿನಿಯರಿಗೆ ಎಚ್ಚರಿಸಿದ್ದರು. ಈ ವಿಡಿಯೋ ಯೂಟ್ಯೂಬ್‍ನಲ್ಲಿ ಹರಿದಾಡುತ್ತಿದ್ದಂತೆಯೇ ಪ್ರಾಂಶುಪಾಲರಿಗೆ ಪ್ರಾಣ ಬೆದರಿಕೆ ಒಡ್ಡಲಾಗಿದೆ ಎಂದು ಕುಕ್ಕೇರ ಅಜಿತ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಹಿಂದೂ ಜಾಗರಣಾ ವೇದಿಕೆಯ ಪ್ರಮುಖರಾದ ಸುಭಾಷ್ ತಿಮ್ಮಯ್ಯ, ಉಮೇಶ್, ವಿದ್ಯಾರ್ಥಿ ಘಟಕದ ಬ್ರಿಜೇಶ್, ಮಾತೃ ಸುರಕ್ಷಾ ಪ್ರಮುಖ್ ತಿಮ್ಮಯ್ಯ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!