ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರತಿ ವರ್ಷ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ವಿಧಾನಸಭೆ ಅಧಿವೇಶನವನ್ನು ಶಾಸಕರು 10 ದಿನಗಳ ವಾರ್ಷಿಕ ಪ್ರವಾಸವೆಂದು ತಿಳಿದಿದ್ದಾರೆಂದು ಜೆಡಿಎಸ್ ಶಾಸಕ ಶರಣಗೌಡ ಕಂದಕೂರ್ ಅವರು ಸೋಮವಾರ ಲೇವಡಿ ಮಾಡಿದರು.
ವಿಧಾನಸಭೆಯಲ್ಲಿ ಸೋಮವಾರ ನಡೆದ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಕುರಿತಾದ ಚರ್ಚೆಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಮಾತನಾಡಲು ಅವಕಾಶ ನೀಡಿದ ಸ್ಪೀಕರ್‌ಗೆ ಕೃತಜ್ಞತೆ ಸಲ್ಲಿಸುವುದಿಲ್ಲ ಎಂದು ಹೇಳುವ ಮೂಲಕ ತಮ್ಮ ಮಾತನ್ನು ಪ್ರಾರಂಭಿಸಿದರು. ಬಳಿಕ ಆಕ್ರೋಶಭರಿತವಾಗಿ ಜಿಲ್ಲೆಯ ಸಮಸ್ಯೆಗಳನ್ನು ಬಿಚ್ಚಿಟ್ಟರು.
ಇದು ವಿಧಾನಸಭೆ ಅಧಿವೇಶನ ಅಲ್ಲ. ನೀವೆಲ್ಲರೂ 20-25 ಕೋಟಿ ರೂಪಾಯಿ ವೆಚ್ಚದಲ್ಲಿ 10 ದಿನಗಳ ಕಾಲ ಈ ಪ್ರದೇಶದಲ್ಲಿ ಪ್ರವಾಸ ಮಾಡುತ್ತಿದ್ದೀರಿ. ಆದರೆ, ನಿಮಗೆ ಅರ್ಥವಾಗದ ಸಂಗತಿಯೆಂದರೆ ಜನರು ತಮ್ಮ ಸಮಸ್ಯೆಗಳೊಂದಿಗೆ ಬಂದಿರುವುದು, ನಾವೆಲ್ಲಪೂ ಅವರ ಸಮಸ್ಯೆ ಬಗ್ಗೆ ಚರ್ಚಿಸುತ್ತಿದ್ದೇವೆಂದು ತಿಳಿದಿದ್ದಾರೆ. ಅವರು ಪರಿಹಾರದ ನಿರೀಕ್ಷೆಯಲ್ಲಿದ್ದಾರೆ. ಆದರೆ ನಾವು ಉತ್ತರಕರ್ನಾಟಕದ 96 ಶಾಸಕರು, ಕಲ್ಯಾಣ ಕರ್ನಾಟಕದ 43 ಮತ್ತು ಕಿತ್ತೂರು ಕರ್ನಾಟಕದ 53 ಶಾಸಕರು, ಜನರಿಗೆ ಏನನ್ನೂ ಮಾಡಿಲ್ಲ ಎಂದಿದ್ದಾರೆ.