ಹೊಸದಿಗಂತ ಬಳ್ಳಾರಿ:
ನಗರದಲ್ಲಿ ಇತ್ತೀಚೆಗೆ ನಡೆದ ಬ್ಯಾನರ್ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹಾಗೂ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟನೆಗೆ ಸಂಬಂಧಿಸಿದ ಹೊಸ ವಿಡಿಯೋ ಸಾಕ್ಷ್ಯಗಳನ್ನು ಬಿಡುಗಡೆ ಮಾಡುವ ಮೂಲಕ ಸಂಚಲನ ಮೂಡಿಸಿದರು.
“ಶಾಸಕ ಭರತ್ ರೆಡ್ಡಿ ಅವರ ಆಪ್ತ ಸತೀಶ್ ರೆಡ್ಡಿ ಮತ್ತು ಅವರ ಸಹಚರರು ಮಾಜಿ ಸಚಿವ ಶ್ರೀರಾಮುಲು ಅವರ ಮೇಲೆ ಮಾರಣಾಂತಿಕ ಹಲ್ಲೆಗೆ ಯತ್ನಿಸಿದ್ದಾರೆ. ವಿಡಿಯೋದಲ್ಲಿ ಶ್ರೀರಾಮುಲು ಅವರ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿರುವುದು ಮತ್ತು ಜಾತಿ ನಿಂದನೆ ಮಾಡಿರುವುದು ಸ್ಪಷ್ಟವಾಗಿ ದಾಖಲಾಗಿದೆ. ಶ್ರೀರಾಮುಲು ಅವರು ಶಾಂತಿ ಕಾಪಾಡುವಂತೆ ಮನವಿ ಮಾಡಿದರೂ, ಉದ್ದೇಶಪೂರ್ವಕವಾಗಿ ಅವರ ಮೈಮೇಲೆ ಬಿದ್ದು ಹಲ್ಲೆ ಮಾಡಲು ಸತೀಶ್ ರೆಡ್ಡಿ ಮುಂದಾಗಿದ್ದಾರೆ,” ಎಂದು ರೆಡ್ಡಿ ದೂರಿದರು.
“ಇದು ಕೇವಲ ಆಕಸ್ಮಿಕ ಗಲಾಟೆಯಲ್ಲ, ಇದೊಂದು ವ್ಯವಸ್ಥಿತ ಸಂಚು. ನನ್ನ ನಿವಾಸದ ಎದುರು ಮಾರಕಾಸ್ತ್ರಗಳೊಂದಿಗೆ ಸಾವಿರಾರು ಜನರನ್ನು ಜಮಾಯಿಸಲಾಗಿತ್ತು. ಶ್ರೀರಾಮುಲು ಅವರ ಮೇಲೆ ಗುಂಡು ಹಾರಿಸಲು ಸಾಧ್ಯವಾಗದಿದ್ದಾಗ ಬೈದಾಡಿದ್ದಾರೆ. ನಾನು ಸ್ಥಳಕ್ಕೆ ಬಂದ ಕೂಡಲೇ ಫೈರಿಂಗ್ ನಡೆಸಲಾಗಿದೆ. ಇದು ನನ್ನನ್ನು ಮತ್ತು ಶ್ರೀರಾಮುಲು ಅವರನ್ನು ಗುರಿಯಾಗಿಸಿಕೊಂಡು ನಡೆಸಿದ ಹತ್ಯೆ ಸಂಚು,” ಎಂದು ಅವರು ಗಂಭೀರ ಆರೋಪ ಮಾಡಿದರು.
ಪ್ರಕರಣವನ್ನು ಸಿಐಡಿಗೆ ವಹಿಸಿರುವ ಸರ್ಕಾರದ ಕ್ರಮವನ್ನು ‘ಕಣ್ಣೊರೆಸುವ ತಂತ್ರ’ ಎಂದು ಕರೆದ ಅವರು, “ಘಟನೆ ನಡೆದು 10 ದಿನಗಳಾದರೂ ಪೊಲೀಸರು ಯಾರನ್ನೂ ಬಂಧಿಸಿಲ್ಲ. ಸಿಐಡಿ ಮತ್ತು ಸ್ಥಳೀಯ ಪೊಲೀಸರ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಈ ಪ್ರಕರಣದಲ್ಲಿ ನ್ಯಾಯ ಸಿಗಬೇಕಾದರೆ ಇದನ್ನು ಸಿಬಿಐ ತನಿಖೆಗೆ ವಹಿಸಬೇಕು ಅಥವಾ ಹೈಕೋರ್ಟ್ನ ಹಾಲಿ ನ್ಯಾಯಾಧೀಶರ ಮೂಲಕ ತನಿಖೆ ನಡೆಸಬೇಕು,” ಎಂದು ಒತ್ತಾಯಿಸಿದರು.
“ಸರ್ಕಾರವು ಶಾಸಕರ ಗೂಂಡಾಗಿರಿಯನ್ನು ಬೆಂಬಲಿಸುತ್ತಿದೆ. ಶ್ರೀರಾಮುಲು ಅವರಂತಹ ಹಿರಿಯ ನಾಯಕರ ವಿರುದ್ಧವೇ ಇಂತಹ ವರ್ತನೆ ತೋರುತ್ತಿರುವುದು ವ್ಯವಸ್ಥೆಯ ದುಸ್ಥಿತಿಗೆ ಸಾಕ್ಷಿ. ಸರ್ಕಾರ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಜನೆವರಿ 17 ರಂದು ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು,” ಎಂದು ಗಾಲಿ ಜನಾರ್ದನ ರೆಡ್ಡಿ ಎಚ್ಚರಿಕೆ ನೀಡಿದರು.

