Friday, February 3, 2023

Latest Posts

ಬಳ್ಳಾರಿ ಉತ್ಸವ: ಗಮನಸೆಳೆದ ವಸಂತ ವೈಭವ, ಭವ್ಯ ಮೆರವಣಿಗೆ!

ಹೊಸದಿಗಂತ ವರದಿ,ಬಳ್ಳಾರಿ:

ಜಿಲ್ಲಾಡಳಿತ ಮೊದಲ ಬಾರಿಗೆ ಆಯೋಜಿಸಿದ ಬಳ್ಳಾರಿ ಉತ್ಸವ ಹಿನ್ನೆಲೆ ಶುಕ್ರವಾರ ಸಂಜೆ ನಡೆದ ವಸಂತ ವೈಭವಕ್ಕೆ ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಚಾಲನೆ ನೀಡಿದರು.

ನೂರಾರು ವೈವಿಧ್ಯಮಯ ಕಲಾತಂಡಗಳೊಂದಿಗೆ ನಡೆದ ವಸಂತ ವೈಭವದ ಭವ್ಯ ಮೆರವಣಿಗೆ, ನಗರದ ವಿಮ್ಸ್ ಆವರಣದಿಂದ ಪ್ರಾರಂಭವಾಗಿ, ಸುಧಾ ಸರ್ಕಲ್, ಇನ್‍ಫೆಂಟ್ರಿ ರಸ್ತೆ, ವಾಲ್ಮೀಕಿ ವೃತ್ತ, ಶ್ರೀ ದುರುಗಮ್ಮ ದೇವಸ್ಥಾನ ಗಡಿಗಿ ಚೆನ್ನಪ್ಪ ವೃತ್ತದ ಮೂಲಕ ಡಾ.ರಾಜ್‍ಕುಮಾರ್ ರಸ್ತೆಯ ಮುನಿಸಿಪಲ್ ಮೈದಾನದವರೆಗೆ‌ ಅದ್ದೂರಿಯಾಗಿ ‌ನಡೆಯಿತು.

ಮೆರವಣಿಗೆಯಲ್ಲಿ ರಮೇಶ್ ಬಂಗಾ ಅವರ ಹುಲಿಕುಣಿತ, ಸುರೇಶ್ ಅವರ ಚಿಟ್ಟಿ ಮೇಳ, ರಾಜೇಶ್.ಪಿ ಅವರ ಬೊಂಬೆ ಕುಣಿತ, ಅಣ್ಣಪ್ಪ ಕೆ.ಎಂ ಬೊಂಬೆ ಮೇಳ, ಮಾರುತಿ ಹೆಚ್.ಎಂ ಸೋಮನ ಕುಣಿತ, ಚಂದ್ರಕಾಂತ ಬಿ ಆಗೇರ ಅವರಿಂದ ಗಾರುಡಿಗೊಂಬೆ ಕುಣಿತ, ಪುರುಷೋತ್ತಮ ಗೌಡ ಅವರಿಂದ ಸುಗ್ಗಿಕುಣಿತ, ಹರೀಶ ಅಚ್ಯುತ ಪಾಲೇಕರರಿಂದ ಬೇಡರ ವೇಷ, ಸುರೇಶ್ ನಾಯ್ಕರಿಂದ ಗುಮಟೆ ಪಾಂಗ, ಶಿವಾನಂದ ಸಿದ್ಧಿ ಅವರಿಂದ ಧಮಾಮಿ ನೃತ್ಯ, ಹೊನ್ನಾ ಬುದ್ಧು ಗೌಡರಿಂದ ಗುಮುಟಾಪಾಂಗ, ದೀಪಾ ಸಿದ್ದಿ ಅವರಿಂದ ಪುಗಡಿ ನೃತ್ಯ, ಗುರುಚರಣ್‍ರಿಂದ ಕಂಗೀಲು, ಚಂದ್ರರಿಂದ ಕುಡುಬಿ ನೃತ್ಯ ಸೇರಿದಂತೆ ವಿವಿಧ ಕಲಾ ತಂಡಗಳು ಗಮನಸೆಳೆದವು.

ಅಂತರ್‌ ರಾಜ್ಯದ ವಿಶೇಷ ಕಲಾ ತಂಡಗಳು
ಕೇರಳದ ಕಾಳೆವೇಷ, ಮಯೂರ ನೃತ್ಯಂ, ಟೇಯಾಂ, ಕಥಕಳಿ, ಹಂಸನೃತ್ಯ, ಪೂಜಾಕುಣಿತ, ಸೋಮನಕುಣಿತ ಕಲಾತಂಡಗಳು ಆಗಮಿಸಲಿವೆ. ಮೈಸೂರಿನ ಪಾತರಗಿತ್ತಿ ನೃತ್ಯ, ತಮಿಳುನಾಡಿನ ಚಂಡೆವಾದನ, ನಗಾರಿ, ಕಂಸಾಳೆ, ಕೋಳಿ ನೃತ್ಯ, ವೇಷಧಾರಿ, ಪಂಜಾಬಿ ಡೋಲ್, ಆಂಜನೇಯವೇಷ ಮತ್ತು ಆಂಧ್ರಪ್ರದೇಶದ ಗೊರವರಕುಣಿತ, ಗಾರುಡಿಗೊಂಬೆ ಕುಣಿತ ಹಾಗೂ ಮಹಾರಾಷ್ಟ್ರದ ಝಾಂಜ್ ಪತಕ್, ಮಹಿಳಾ ಡೊಳ್ಳು ಕುಣಿತ ಈ ಅಂತರ್‍ರಾಜ್ಯ ವಿಶೇಷ ಕಲಾತಂಡಗಳು ವಸಂತ ವೈಭವ ಮೆರವಣಿಗೆಯಲ್ಲಿ ಗಮನಸೆಳೆದವು. ಈ ಸಂದರ್ಭದಲ್ಲಿ ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ, ಮಹಾನಗರ ಪಾಲಿಕೆ ಮೇಯರ್ ರಾಜೇಶ್ವರಿ ಸುಬ್ಬರಾಯಡು, ಮಾಜಿ ಸಂಸದೆ ಜೆ.ಶಾಂತಾ, ಜಿಲ್ಲಾಧಿಕಾರಿ ಪವನ್ ಕುಮಾರ್ ಮಲಪಾಟೆ, ಎಸ್ಪಿ ರಂಜಿತ ಕುಮಾರ್ ಬಂಡಾರು, ಜಿ.ಪಂ.ಸಿಇಒ ಸಿದ್ದಲಿಂಗಮೂರ್ತಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೀರಶೇಖರ ರೆಡ್ಡಿ, ವಿ.ಕೆ.ಬಸಪ್ಪ ಸೇರಿದಂತೆ ಇತರರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!