Saturday, July 2, 2022

Latest Posts

ಬೀಟೆ ಮರ ಅಕ್ರಮ ಸಾಗಾಟ: ವಾಹನ ಸಹಿತ ಓರ್ವನ ಬಂಧನ

ಹೊಸದಿಗಂತ ವರದಿ,ಮಡಿಕೇರಿ :

ಬೀಟೆ ಮರವನ್ನು ಕತ್ತರಿಸಿ ದಿಮ್ಮಿಗಳನ್ನಾಗಿ ಪರಿವರ್ತಿಸಿ ಮೈಸೂರಿಗೆ ಸಾಗಾಟ ಮಾಡಲು ಪ್ರಯತ್ನಿಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ, ಆರೋಪಿ ಸಹಿತ ವಾಹನ ಹಾಗೂ ಮರವನ್ನು ವಶಕ್ಕೆ ಪಡೆದಿದೆ.
ಮೂರ್ನಾಡು ಗಾಂಧಿನಗರ ನಿವಾಸಿ ಸಿಲ್ವರ್ ಮರ ವ್ಯಾಪಾರಿ ತನ್ವೀರ್(34) ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ. 2 ಲಕ್ಷ ರೂ. ಮೌಲ್ಯದ ಬೀಟೆ ಮರ, 3 ಲಕ್ಷ ರೂ. ಮೌಲ್ಯದ ವಾಹನವನ್ನು ವಶಕ್ಕೆ ಪಡೆಯಲಾಗಿದ್ದು, ಆರೋಪಿಯನ್ನು ಪೊನ್ನಂಪೇಟೆ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.
ವೀರಾಜಪೇಟೆ ತಾಲೂಕು ಮಾಲ್ದಾರೆ ಸಮೀಪದ ಕಲ್ಲಳ್ಳದ ಕಾಫಿ ತೋಟದಲ್ಲಿ ಬೀಟೆ ಮರವನ್ನು ಕಡಿದು ಅದನ್ನು ದಿಮ್ಮಿಗಳನ್ನಾಗಿ ಪರಿವರ್ತಿಸಿ ಸಾಗಾಟಕ್ಕೆ ಪ್ರಯತ್ನಿಸುತ್ತಿರುವ ಬಗ್ಗೆ ವೀರಾಜಪೇಟೆ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ ಖಚಿತ ಮಾಹಿತಿ ಕಲೆ ಹಾಕಿತ್ತು.
ಅದರಂತೆ ಭಾನುವಾರ ಬೆಳಗ್ಗೆ 4.30ರ ಸಮಯದಲ್ಲಿ ದಾಳಿ ನಡೆಸಿದ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ವಾಹನ ಸಹಿತ ಓರ್ವ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ತೋಟದಲ್ಲಿ ಕಡಿದು ಹಾಕಿದ್ದ ಬೀಟೆ ಮರದ ಇತರೇ ದಿಮ್ಮಿಗಳನ್ನು ಕೂಡ ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿ ಸಹಿತ ಮರ ಸಾಗಾಟಕ್ಕೆ ಬಳಸಿದ್ದ ಈಕೋ ಕಾರನ್ನು(ಕೆ.ಎಲ್. 43-ಸಿ-7375) ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ ವಶಕ್ಕೆ ಪಡೆದಿದೆ. ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಬೀಟೆ ಮರದ ದಿಮ್ಮಿಗಳನ್ನು ಮೈಸೂರಿಗೆ ಸಾಗಿಸುತ್ತಿರುವುದಾಗಿ ಮಾಹಿತಿ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸ್ ವರಿಷ್ಠಾಧಿಕಾರಿ ಸುರೇಶ್ ಬಾಬು ಮಾರ್ಗದರ್ಶನದಲ್ಲಿ ನಡೆಸಲಾದ ಕಾರ್ಯಾಚರಣೆಯಲ್ಲಿ ಉಪ ನಿರೀಕ್ಷಕಿ ಕು. ವೀಣಾ ನಾಯಕ್, ಸಿಬ್ಬಂದಿಗಳಾದ ಕೆ.ಬಿ. ಸೋಮಣ್ಣ, ಟಿ.ಪಿ. ಮಂಜುನಾಥ್, ಪಿ.ಬಿ. ಮೊಣ್ಣಪ್ಪ, ಎಂ.ಬಿ.ಗಣೇಶ್, ಎಸ್.ಎಂ. ಯೋಗೇಶ್ ಅವರು ಪಾಲ್ಗೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss