ಹೊಸ ದಿಗಂತ ವರದಿ, ಚಿತ್ರದುರ್ಗ:
ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿದ್ದು, ಅಡೆತಡೆಗಳನ್ನು ನಿವಾರಿಸಿ ಯೋಜನೆ ಪೂರ್ಣಗೊಳಿಸು
ವಂತೆ ಅಧಿಕಾರಿಗಳಿಗೆ ಸಂಸದ ಎ.ನಾರಾಯಣಸ್ವಾಮಿ ಸೂಚನೆ ನೀಡಿದರು.
ನಗರದ ಭದ್ರಾ ಮೇಲ್ದಂಡೆ ಯೋಜನಾ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಭದ್ರಾ ಮೇಲ್ದಂಡೆ ಯೋಜನೆ ಭೂಸ್ವಾಧೀನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯೋಜನೆಗೆ ಸಂಬಂಧಿಸಿದಂತೆ ಚಿಕ್ಕಮಗಳೂರು ಹಾಗೂ ತುಮಕೂರು ಜಿಲ್ಲೆಯಲ್ಲಿ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿದೆ. ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಲಾಗುವುದು ಎಂದು ಹೇಳಿದರು.
ಈಗಾಗಲೇ ಮುಖ್ಯಮಂತ್ರಿಗಳು ಇಲಾಖಾಧಿಕಾರಿಗೊಂದಿಗೆ ಸಭೆ ನಡೆಸಿ, ಭದ್ರಾ ಮೇಲ್ದಂಡೆ ಯೋಜನೆಗೆ ತುರ್ತು ಅಗತ್ಯ ಇರುವ ಅನುದಾನ ಬಿಡುಗಡೆಗೆ ಒಪ್ಪಿಗೆ ನೀಡಿದ್ದಾರೆ. ಈ ಸಭೆಯಲ್ಲಿ ಮುಖ್ಯ ಅಭಿಯಂತರರು, ಸಿಪಿಓ ಇಂಜಿನಿಯರ್ಗಳು ಸರ್ಕಾರ ಹಣ ಬಿಡುಗಡೆ ಮಾಡಿರುವ ಬಗ್ಗೆ ದೃಢಿಕರಿಸಿದ್ದಾರೆ. ಉಳಿದ ಮೂರು ತಿಂಗಳ ನಂತರ ಅವಾರ್ಡ್ ಜಾರಿಗೊಳಿಸುವಂತೆ ತರೀಕೆರೆ ಉಪವಿಭಾಗಧಿಕಾರಿಗಳು ಕ್ರಮವಹಿಸುವಂತೆ ನಿರ್ದೇಶನ ನೀಡಿದರು.
ಪ್ಯಾಕೇಜ್-1 ಕಾಮಗಾರಿ ಪೂರ್ಣಗೊಳಿಸಲು ಒಟ್ಟಾರೆ 181.72 ಕೋಟಿ ಮೊತ್ತದ ಅನುದಾನ ಅವಶ್ಯವಿದ್ದು, ಪ್ಯಾಕೇಜ್-2 ಮತ್ತು 3 ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದೆ. 2019 ಅಕ್ಟೋಬರ್ 3 ರಿಂದ 2021ಜನವರಿ 2 ರವರೆಗೆ ವಾಣಿವಿಲಾಸ ಸಾಗರಕ್ಕೆ ಪ್ರಾಯೋಗಿಕವಾಗಿ ನೀರು ಹರಿಸಲಾಗಿದೆ. ಹಾಗೂ ಪ್ರಸಕ್ತ ಸಾಲಿನಲ್ಲಿ 2020 ಸೆಪ್ಟಂಬರ್ 6 ರಿಂದ 2021 ಜನವರಿ 2 ರವರೆಗೆ ನೀರನ್ನು ಹರಿಸಲಾಗಿದೆ.
ಚಿತ್ರದುರ್ಗ ಶಾಖಾ ಕಾಲುವೆ ಪ್ಯಾಕೇಜ್-5 ರಲ್ಲಿ ಒಟ್ಟು 10 ಗ್ರಾಮಗಳು ಒಳಗೊಂಡಿದ್ದು, ಅದರಲ್ಲಿ 4 ಗ್ರಾಮಗಳ ಭೂ ಸ್ವಾಧೀನಕ್ಕೆ ಅನುಮೋದನೆ ಸಲ್ಲಿಸಲಾಗಿದೆ. ಇನ್ನುಳಿದ 6 ಗ್ರಾಮಗಳ ಭೂ ಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ. ಪ್ಯಾಕೇಜ್-10ರಲ್ಲಿ ಭರಮಪುರ, ಪಾಲ್ವನಹಳ್ಳಿ ಗ್ರಾಮಗಳಿಗೆ ಅನುಮೋದನೆ ಗೊಂಡಿದೆ. ಮರಡಿದೇವಿಗೆರೆ, ಚಿಕ್ಕಸಿದ್ದವ್ವನಹಳ್ಳಿ ಗ್ರಾಮಗಳ ಜಮೀನುಗಳ ಅನುಮೋದನೆ ಸಲ್ಲಿಸಲಾಗಿದೆ. ದೊಡ್ಡಸಿದ್ದವನಹಳ್ಳಿ ಗ್ರಾಮದ ಜೆಎಂಸಿ ಪೂರ್ಣಗೊಂಡಿದೆ. ತುಮಕೂರು ಶಾಖಾ ಕಾಲುವೆ ಪ್ಯಾಕೇಜ್-8ರಲ್ಲಿ ಕಾಮಗಾರಿ ಆಮೆಗತಿಯಲ್ಲಿದ್ದು, ಅಧಿಕಾರಿಗಳ ಕೆಲಸ ತೃಪ್ತಿದಾಯಕವಾಗಿಲ್ಲ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಈ.ಬಾಲಕೃಷ್ಣ, ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಇಂಜಿನಿಯರ್ ವೇಣುಗೋಪಾಲ್ ಸೇರಿದಂತೆ ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು, ಹೊಸದುರ್ಗ, ಹೊಳಲ್ಕೆರೆ, ಮೊಳಕಾಲ್ಮೂರು, ಸಿರಾ, ಪಾವಗಡ ತಾಲ್ಲೂಕುಗಳ ಅಧಿಕಾರಿಗಳು ಹಾಗೂ ಯೋಜನೆಯ ವಿವಿಧ ಇಂಜಿನಿಯರ್ಗಳು ಉಪಸ್ಥಿತರಿದ್ದರು.