ವಿಐಎಸ್ಎಲ್ ಉಳಿಸಲು ಭದ್ರಾವತಿ ಬಂದ್: ಸಂಪೂರ್ಣ ಯಶಸ್ವಿ

ಹೊಸದಿಗಂತ ವರದಿ, ಶಿವಮೊಗ್ಗ :

ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಶುಕ್ರವಾರ ಹಮ್ಮಿಕೊಂಡಿದ್ದ ಭದ್ರಾವತಿ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.

ವಿವಿಧ ರಾಜಕೀಯ ಪಕ್ಷಗಳಿಂದ, ಸಂಘ-ಸಂಸ್ಥೆಗಳಿಂದ, ನಾಗರೀಕರಿಂದ ವ್ಯಾಪಕ ಬೆಂಬಲ ವ್ಯಕ್ತವಾಯಿತು.

ಸ್ವಯಂಪ್ರೇರಿತರಾಗಿ ಬೆಳಗ್ಗೆಯಿಂದಲೇ ಹೋಟೆಲ್, ಪೆಟ್ರೋಲ್ ಬಂಕ್, ಚಿತ್ರಮಂದಿರಗಳು ಸೇರಿದಂತೆ ಅಂಗಡಿ-ಮುಂಗಟ್ಟು ಮುಚ್ಚಲ್ಪಟ್ಟಿದ್ದವು. ಸರ್ಕಾರಿ ಹಾಗು ಖಾಸಗಿ ಬಸ್‌ಗಳು, ಆಟೋ ಸಂಚಾರ ಸ್ಥಗಿತಗೊಂಡಿತ್ತು. ಶಾಲಾ-ಕಾಲೇಜಿಗೆ ರಜೆ ಘೋಷಿಸಲಾಗಿತ್ತು. ಉಳಿದಂತೆ ಕೆಲವು ಸರ್ಕಾರಿ ಕಚೇರಿಗಳು ಸಹ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿ ರಜೆ ಘೋಷಿಸಿದ್ದವು. ನಗರದ ವಕೀಲರು ಸಹ ನ್ಯಾಯಾಲಯ ಕಲಾಪಗಳಿಂದ ದೂರ ಉಳಿದು ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಬೆಂಬಲ ವ್ಯಕ್ತಪಡಿಸಿದರು.

ನಗರದ ಪ್ರಮುಖ ವೃತ್ತಗಳಲ್ಲಿ ಗುತ್ತಿಗೆ ಕಾರ್ಮಿಕರು ಟೈರ್‌ಗಳಿಗೆ ಬೆಂಕಿ ಹಚ್ಚಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಕ್ಷೇತ್ರದಾದ್ಯಂತ ಬೈಕ್ ರ್ಯಾಲಿ ನಡೆಸಿ ಬಂದ್‌ಗೆ ಸಹಕರಿಸುವಂತೆ ಮನವಿ ಮಾಡಿದರು. ವಿವಿಧ ಸಂಘ-ಸಂಸ್ಥೆಗಳು, ಕಾಂಗ್ರೆಸ್, ಜೆಡಿಎಸ್, ಎಎಪಿ, ಕೆಆರ್‌ಎಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು, ಬೆಂಬಲ ಸೂಚಿಸಿದ್ದವು.

ಬಂದ್ ಹಿನ್ನಲೆ ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ವಾಣಿಜ್ಯ ರಸ್ತೆಗಳು ಬಿಕೋ ಎನ್ನುತ್ತಿದ್ದವು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!