ಅಪರಾಧ ಪೃವೃತ್ತಿಯ ಮೂಲವನ್ನೇ ತೆಗೆದುಹಾಕಲು ಭಗವದ್ಗೀತೆ ಸಹಕಾರಿ: ಸೋಂದಾ ಸ್ವರ್ಣವಲ್ಲೀ ಶ್ರೀ

ಹೊಸದಿಗಂತ ವರದಿ, ಶಿರಸಿ:

ವ್ಯಕ್ತಿತ್ವ ಪುನರುತ್ಥಾನ, ನೈತಿಕತೆ ಪುನರುತ್ಥಾನ, ಸಾಮಾಜಿಕ ಸಾಮರಸ್ಯ ಹಾಗೂ ರಾಷ್ಟ್ರೀಯ ಭಾವೈಕ್ಯತೆ – ಈ 4 ಉದ್ದೇಶವಿಟ್ಟುಕೊಂಡು ಕಳೆದ 17 ವರ್ಷಗಳಿಂದ ನಿರಂತರವಾಗಿ ಭಗವದ್ಗೀತೆ ಅಭಿಯಾನ ನಡೆಸಿಕೊಂಡು ಬರಲಾಗುತ್ತಿದೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ಹೇಳಿದ್ದಾರೆ.

ಬೆಳಗಾವಿಯಲ್ಲಿ ನ.21ರಿಂದ ಡಿಸೆಂಬರ್ 23ರ ವರೆಗೆ ನಡೆಯಲಿರುವ ರಾಜ್ಯ ಮಟ್ಟದ ಭಗವದ್ಗೀತೆ ಅಭಿಯಾನದ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗಾವಿ ಗುರುದೇವ ರಾನಡೆ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ವಿವಿಧ ಸಮಾಜಗಳ ಪ್ರಮುಖರನ್ನು ಉದ್ದೇಶಿಸಿ ಅವರು ಮಾತನಾಡಿದರು. ಅಪರಾಧ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುತ್ತಿವೆ. ಅಪರಾಧ ನಡೆದ ನಂತರ ಏನು ಮಾಡಬೇಕು ಎನ್ನುವುದಕ್ಕಿಂತ ಅಪರಾಧ ಮಾಡದೆ ಇರುವಂತೆ ಮಾಡುವುದಕ್ಕಾಗಿ ಭಗವದ್ಗೀತೆ ಅಭಿಯಾನ ಮಾಡಲಾಗುತ್ತಿದೆ. ಅಪರಾಧದ ಮೂಲವನ್ನೇ ಚಿವುಟಿ ಹಾಕುವುದು ಇದರ ಉದ್ದೇಶ. ಆಸೆ ಮತ್ತು ದ್ವೇಷ ಅಪರಾಧಕ್ಕೆ ಮೂಲ. ಅಪರಾಧ ಪೃವೃತ್ತಿಯ ಮೂಲವನ್ನೇ ತೆಗೆದುಹಾಕಲು ಭಗವದ್ಗೀತೆ ಸಹಕಾರಿಯಾಗಿದೆ ಎಂದರು.

ನವೆಂಬರ್ 21ರಂದು ಅಭಿಯಾನದ ಉದ್ಘಾಟನೆ ನಡೆಯಲಿದೆ. ಅಲ್ಲಿಂದ ಡಿಸೆಂಬರ್ 21ರ ವರೆಗೆ ರಾಜ್ಯಾದ್ಯಂತ ಭಗವದ್ಗೀತೆ ಪಠಣ, ಪ್ರವಚನ ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ. ಡಿಸೆಂಬರ್ 2 ರಂದು ಬೆಳಗಾವಿಯಲ್ಲಿ ಭಗವದ್ಗೀತೆ ಮತ್ತು ಕಾನೂನು ಕಾರ್ಯಕ್ರಮ ನಡೆಯುವುದು. ಡಿಸೆಂಬರ್ 18ರಂದು ಗೀತಾ ಸಮನ್ವಯ ಎನ್ನುವ ವಿಶೇಷ ಕಾರ್ಯಕ್ರಮ ನಡೆಯಲಿದೆ. ಡಿಸೆಂಬರ್ 22ರಂದು ಶಾಲಾ ಮಕ್ಕಳಿಗಾಗಿ ಭಗವದ್ಗೀತೆ ಶ್ಲೋಖ ಪಠಣ ಸ್ಪರ್ಧೆ ನಡೆಯುವುದು. ಡಿಸೆಂಬರ್ 23ರಂದು ಮಹಾಸಮರ್ಪಣೆ ನಡೆಯಲಿದೆ ಎಂದರು.

ಗುರುದೇವ ರಾನಡೆ ಮಂದಿರದ ಗೌರವ ಕಾರ್ಯದರ್ಶಿ ಎಂ.ಬಿ.ಜಿರಲಿ, ಮಾಜಿ ಶಾಸಕ ಅನಿಲ ಬೆನಕೆ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಅಭಿಯಾನದ ಕಾರ್ಯಾಧ್ಯಕ್ಷ ಪರಮೇಶ್ವರ ಹೆಗಡೆ, ಕಾರ್ಯದರ್ಶಿ ಎಂ.ಕೆ.ಹೆಗಡೆ, ಸಂಚಾಲಕ ಸುಬ್ರಹ್ಮಣ್ಯ ಭಟ್, ಉಪಾಧ್ಯಕ್ಷೆ ಪೂರ್ಣಿಮಾ ಹೆಗಡೆ, ವಿವಿಧ ಸಮಿತಿಗಳ ಪ್ರಮುಖರಾದ ರಾಮನಾಥ ನಾಯಕ, ಗಣೇಶ ಹೆಗಡೆ, ಕೃಷ್ಣ ಭಟ್, ವಿನಾಯಕ ಹೆಗಡೆ, ಗೀತಾ ಹೆಗಡೆ, ಸುಧಾ ಹೆಗಡೆ, ವಸುಮತಿ ಹೆಗಡೆ ಮೊದಲಾದವರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!