ಬ್ರಿಟೀಷರಿಗೆ ಸಿಖ್ಖರ ದೈರ್ಯ- ಶೌರ್ಯ ಗುಣಗಳನ್ನು ಪರಿಚಯಿಸಿದ್ದ ಭಾಯಿ ಮಹಾರಾಜ್ ಸಿಂಗ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ (ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವ ವಿಶೇಷ)
ಬ್ರಿಟೀಷರ ವಿರುದ್ಧ ಶಸ್ತ್ರಾಸ್ತ್ರ ಹೋರಾಟ ನಡೆಸಿದ ಮೊದಲ ಸಿಖ್‌ ನಾಯಕ ಮಹಾರಾಜ್ ಸಿಂಗ್ ಪಂಜಾಬ್‌ನ ಲುಧಿಯಾನ ಜಿಲ್ಲೆಯ ರಬ್ಬನ್ ಗ್ರಾಮದಲ್ಲಿ ಜನಿಸಿದರು. ಯುವಕನಾಗಿದ್ದಾಗ, ನೌರಂಗಾಬಾದ್ ಡೇರಾದಲ್ಲಿ ಕೆಲಸ ಮಾಡಿದರು. ಅಲ್ಲಿ ಅವರು ರಾಜಕೀಯ ಮತ್ತು ಆಧ್ಯಾತ್ಮಿಕತೆಯ ಸದ್ಗುಣಗಳನ್ನು ಕಲಿತರು.
ಅವರ ಶ್ರೇಷ್ಠತೆಯನ್ನು ಮೆಚ್ಚಿದ ಜನರು ಭಾಯಿ ಮಹಾರಾಜ್ ಸಿಂಗ್ ಎಂದು ಸಂಬೋಧಿಸಲು ಪ್ರಾರಂಭಿಸಿದರು. ಅವರು 1844 ರಲ್ಲಿ ಡೇರಾ ಮುಖ್ಯಸ್ಥರಾಗಿ ನೇಮಕಗೊಂಡರು. ಮೊದಲ ಆಂಗ್ಲೋ-ಸಿಖ್ ಯುದ್ಧದ ಬಳಿಕ (1845-46), ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಜನರನ್ನು ಪ್ರಚೋದಿಸಲು ಮಹಾರಾಜ್ ಸಿಂಗ್ ವ್ಯಾಪಕವಾಗಿ ಪ್ರವಾಸ ಮಾಡಿದರು. ಆಳವಾದ ಆಧ್ಯಾತ್ಮಿಕ ಜ್ಞಾನ ಹೊಂದಿದ್ದ ಮಹಾರಾಜ್ ಸಿಂಗ್ ಅವರು ಅತ್ಯುತ್ತಮ ಮಿಲಿಟರಿ ನಾಯಕತ್ವವನ್ನೂ ಹೊಂದಿದ್ದು ವಿಶೇಷ. ಅವರೊಬ್ಬ ವೀರನಾಗಿದ್ದರು. ಅವ ಉರಿಯುವ ಭಾಷಣಗಳಿಂದ ದೋವಾಬ್ ಪ್ರದೇಶದ ಜನರು ರೋಮಾಂಚನಗೊಂಡರು.
1847 ರಲ್ಲಿ, ಭಾಯಿ ಮಹಾರಾಜ್ ಸಿಂಗ್ ಮೇಲೆ ಲಾಹೋರ್‌ನಲ್ಲಿ ಬ್ರಿಟಿಷ್ ರೆಸಿಡೆಂಟ್ ಹೆನ್ರಿ ಲಾರೆನ್ಸ್‌ನ ಹತ್ಯೆಗೆ ಸಂಚು ರೂಪಿಸಿದ ಆರೋಪ ಕೇಳಿಬಂತು. ಭಾಯಿ ಮಹಾರಾಜ್ ಸಿಂಗ್ ತಲೆಗೆ ಬ್ರಿಟಿಷ್ ಸರ್ಕಾರ 10,000 ರು. ಬಹುಮಾನ ಘೋಷಿಸಿತು. ಎರಡನೇ ಆಂಗ್ಲೋ-ಸಿಖ್ ಯುದ್ಧದಲ್ಲಿ ಸಿಖ್ಖರ ಸೋಲಿನ ನಂತರ ಮತ್ತು 1849 ರಲ್ಲಿ ಬಿಟೀಷರು ಪಂಜಾಬ್ ಸ್ವಾಧೀನಪಡಿಸಿಕೊಂಡ ನಂತವೂ ಮಹರಾಜ್‌ ಸಿಂಗ್ ಅವರು ಶಸ್ತ್ರಾಸ್ತ್ರಗಳನ್ನು ತ್ಯಜಿಸಲಿಲ್ಲ ಬದಲಿಗೆ ಬ್ರಿಟಿಷರ ವಿರುದ್ಧ ಕಠೋರ ಯುದ್ಧವನ್ನು ಮುಂದುವರೆಸಿದರು. ಒಂದು ಸುಳಿವಿನ ನಂತರ, ಅವರನ್ನು ಡಿಸೆಂಬರ್ 1849 ರಲ್ಲಿ ಪಂಜಾಬ್‌ನ ಆದಂಪುರದಲ್ಲಿ ಬಂಧಿಸಲಾಯಿತು. ಭಾರತದಲ್ಲಿನ ವಿಚಾರಣೆಯು ಜನರ ದಂಗೆಗೆ ಕಾರಣವಾಗಬಹುದು ಎಂಬ ಭಯದಿಂದ, ಅವರನ್ನು 1850 ರಲ್ಲಿ ಬ್ರಿಟೀಷರು ರಾಜಕೀಯ ಖೈದಿಯಾಗಿ ಸಿಂಗಾಪುರಕ್ಕೆ ಸಾಗಿಸಿದರು. ಅವರನ್ನು ಜೀವನಪರ್ಯಂತ ಗಡೀಪಾರು ಮಾಡಲಾಯಿತು. ಅವರು ಔಟ್ರಾಮ್ ಜೈಲಿನಲ್ಲಿ ಏಕಾಂತ ಸೆರೆಮನೆಯಲ್ಲಿ ಬಂಧಿಸಲ್ಪಟ್ಟರು, ಅಲ್ಲಿನ ಕತ್ತಲೆ ಮತ್ತು ಕೊಳಕು ಕೋಣೆಯಲ್ಲಿ ತಮ್ಮ ಉಳಿದ ಜೀವಿತವನ್ನು ಕಳೆದು 1856 ರಲ್ಲಿ ಕ್ಯಾನ್ಸರ್ನಿಂದ ನಿಧನರಾದರು.
ಭಾಯಿ ಮಹಾರಾಜ್ ಸಿಂಗ್ ಅವರು ಸಿಂಗಾಪುರಕ್ಕೆ ಕಾಲಿಟ್ಟ ಮೊದಲ ಸಿಖ್ ಎಂದು ಪರಿಗಣಿಸಲ್ಪಟ್ಟಿದ್ದಾರೆ.
ಭಾಯಿ ಮಹಾರಾಜ್ ಸಿಂಗ್ ಅವರನ್ನು ಸಿಖ್ಖರು ಮತ್ತು ಸಿಖ್ಖರಲ್ಲದವರು ಗೌರವಿಸುತ್ತಾರೆ ಮತ್ತು ಮೆಚ್ಚುತ್ತಾರೆ. ಅವರೆಂತಹ ಪ್ರಭಾವಶಾಲಿ ಸ್ಥಾನವನ್ನು ಪಡೆದಿದ್ದರೆಂದರೆ ಗುರುದ್ವಾರದಲ್ಲಿ ಅವರ ಸ್ಮಾರಕವನ್ನು ನಿರ್ಮಿಸಲಾಗಿದೆ. ಸಿಂಗಾಪುರದ ನಿವಾಸಿ ಉಪನೀತ್ ಕೌರ್ ನಾಗ್ಪಾಲ್ ಎಂಬುವವರು, “ದಿ ಸೇಂಟ್ ಸೋಲ್ಜರ್ – ಅನ್‌ಕವರ್ ದಿ ಸ್ಟೋರಿ ಆಫ್ ಸಿಂಗಾಪುರʼಸ್ ಫಸ್ಟ್ ಸಿಖ್ ಎಂಬ ಸಾಕ್ಷ್ಯಚಿತ್ರವನ್ನು ನಿರ್ದೇಶಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!