ಸದ್ದಿಲ್ಲದೆ ತೆರೆಗೆ ಸಿದ್ದಗೊಂಡ ‘ಭೀರ್ಯ’: ಏಪ್ರಿಲ್’ನಲ್ಲಿ ಬಿಡುಗಡೆ

ಹೊಸದಿಗಂತ ವರದಿ,ಮಡಿಕೇರಿ:

ಕೆಲವೊಂದು ಸಿನೆಮಾಗಳು ಭಯಂಕರ ಸದ್ದು ಮಾಡಿ, ಮಾಧ್ಯಮಗಳಲ್ಲಿ ಪ್ರಚಾರ ಪಡೆದುಕೊಂಡು ಕೊನೆಗೆ ಬಿಡುಗಡೆಯಾಗದೆ ಕೇವಲ ಪ್ರಚಾರಕ್ಕೆ ಮಾತ್ರ ಸೀಮಿತವಾಗುವುದಿದೆ. ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಚಿತ್ರೀಕರಣ ನಡೆದರೂ ಚಿತ್ರದ ಹೆಸರನ್ನು ಎಲ್ಲಿಯೂ ಬಿಟ್ಟುಕೊಡದೆ ಸಂಪೂರ್ಣ ಚಿತ್ರೀಕರಣ ಮುಗಿಸಿ, ಇನ್ನೇನೂ ಬೆಳ್ಳಿ ಪರದೆಯ ಮೇಲೆ ಕಾಣಿಸಿಕೊಳ್ಳುವ ಹಂತದಲ್ಲಿರುವಾಗ ತನ್ನ ‘ಟೈಟಲ್’ ಬಿಡುಗಡೆ ಮಾಡುವ ಚಿತ್ರ ತಂಡವೊಂದು ಕೊಡವ ಭಾಷಾ ಸಿನೆಮಾ ಕ್ಷೇತ್ರದಲ್ಲಿ ಹೊಸತನಕ್ಕೆ ನಾಂದಿ ಹಾಡಿದೆ.
ಹೌದು… ಸಂಪೂರ್ಣ ಚಿತ್ರೀಕರಣ ಮುಗಿಸಿದ ಕೊಡವ ಸಿನೆಮಾವೊಂದು ಈ ರೀತಿ ಸದ್ದಿಲ್ಲದೆ ಏಪ್ರಿಲ್ ತಿಂಗಳಲ್ಲಿ ಬಿಡುಗಡೆಗೊಳ್ಳಲು ಸಜ್ಜಾಗಿದೆ.
ಟೈಟಲ್ ಕಾರ್ಡ್ ಬಿಡುಗಡೆ:’ತೀತೀರ ಸಿನಿ ಕ್ರಿಯೇಷನ್’ ನಿರ್ಮಾಣದಲ್ಲಿ ಬಲ್ಯಮೀದೆರೀರ ಆರ್ಯನ್ ಮುದ್ದಪ್ಪ ನಿರ್ದೇಶನದಲ್ಲಿ, ಉದ್ಯಮಿ ತೀತೀರ ಶರ್ಮಿಲಿ ಅಪ್ಪಚ್ಚು ಚಿತ್ರಕ್ಕೆ ಸಂಪೂರ್ಣ ಹಣ ಹೂಡಿಕೆ ಮಾಡಿದ್ದು ಚಿತ್ರ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಹಿರಿಯ ಹಾಗೂ ಕಿರಿಯ ಕಲಾವಿದರನ್ನೊಳಗೊಂಡ ಈ ಸಿನೆಮಾದ ಹೆಸರನ್ನು ಬೆಂಗಳೂರು ಕೊಡವ ಸಮಾಜ ಅಧ್ಯಕ್ಷ ಹಾಗೂ ಹೈಕೋರ್ಟ್’ನ ಖ್ಯಾತ ವಕೀಲ ಮುಕ್ಕಾಟೀರ ಟಿ ನಾಣಯ್ಯ ಟೈಟಲ್ ಕಾರ್ಡ್ ಬಿಡುಗಡೆ ಮಾಡುವ ಮೂಲಕ ‘ಭೀರ್ಯ’ ಎಂದು ಸಿನೆಮಾ ಹೆಸರನ್ನು ಲೋಕಾರ್ಪಣೆ ಮಾಡಿದರು.
ಟೈಟಲ್ ಕಾರ್ಡ್ ಬಿಡುಗಡೆ ಮಾಡುವ ಮೂಲಕ ಸಿನೆಮಾಕ್ಕೆ ಶುಭ ಕೋರಿದ ವಕೀಲ ಎಂ.ಟಿ. ನಾಣಯ್ಯ, ಕೊಡವ ಭಾಷೆಯಲ್ಲಿ ಇನ್ನೂ ಹೆಚ್ಚೆಚ್ಚು ಸಿನೆಮಾಗಳು ಬರಬೇಕು, ಸಿನೆಮಾ ಎನ್ನುವುದು ಒಂದು ಭಾಷೆಯ ಬೆಳವಣಿಗೆಗೆ ಸಹಕಾರಿಯಾಗುವುದಲ್ಲದೆ ಒಂದು ಉತ್ತಮ ಸಂದೇಶಗಳನ್ನು ಜನರಿಗೆ ನೇರವಾಗಿ ತಲುಪಿಸಲು ಉತ್ತಮ ಮಾಧ್ಯಮವಾಗಿದೆ. ಹಾಗೆಯೇ ಕೇವಲ ಹೆಸರಿಗಷ್ಟೇ ಸಿನೆಮಾ ನಿರ್ಮಿಸದೆ ಸದಭಿರುಚಿಯ ಹಾಗೂ ಉತ್ತಮ ಸಂದೇಶ ಸಾರುವ ಸಿನೆಮಾಗಳು ಬರಬೇಕಿದೆ ಎಂದು ಅಭಿಪ್ರಾಯಪಟ್ಟರು.
ವೀರ-ಶೌರ್ಯ, ಗತ್ತು-ಗಾಂಭೀರ್ಯಕ್ಕೆ ಹೆಸರಾದ ಕೊಡವ ಜನಾಂಗದಲ್ಲಿ “ಭೀರ್ಯ” ಹೆಸರೇ ಇದೀಗ ಸಿನಿ ವಲಯದಲ್ಲಿ ಹಾಗೂ ಕೊಡಗಿನಲ್ಲಿ ಸಂಚಲನ ಮೂಡಿಸಿದೆ.
“ಭೀರ್ಯ” ಬದಲಾವಣೆರ ಬೊಳಿ… ಎಂಬ ಶಿರ್ಷಿಕೆಯಡಿ ಕೊಡವ ಭಾಷೆಯಲ್ಲಿ ನಿರ್ಮಾಣವಾಗಿರುವ ಈ ಚಿತ್ರದ ಚಿತ್ರೀಕರಣದ ಭಾಗ ಸಂಪೂರ್ಣ ಮುಗಿದಿದ್ದು, ಡಬ್ಬಿಂಗ್ ಹಾಗೂ ಇತರ ಒಂದಷ್ಟು ಕೆಲಸಗಳು ಮಾತ್ರ ಬಾಕಿ ಇದೆ ಎಂದು ಚಿತ್ರದ ನಿರ್ಮಾಪಕಿ ತೀತೀರ ಶರ್ಮಿಲಿ ಅಪ್ಪಚ್ಚು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ಬಲ್ಯಮೀದೆರೀರ ಆರ್ಯನ್ ಮುದ್ದಪ್ಪ, ಚಿತ್ರದ ಖಳನಾಯಕ ನಟ ಉಡುಪಿಯ ರಾಜ್ ಚರಣ್ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!