ಫೀ.ಮಾ.ಕಾರ್ಯಪ್ಪ-ಜನರಲ್ ತಿಮ್ಮಯ್ಯಗೆ ಭಾರತ ರತ್ನ ಪದವಿ: ಅಖಿಲ ಕೊಡವ ಸಮಾಜ ಒತ್ತಾಯ

ಹೊಸದಿಗಂತ ವರದಿ, ಮಡಿಕೇರಿ:
ಈ ದೇಶ ಕಂಡಿರುವ ಅದ್ಭುತ ವೀರ ಸೇನಾನಿಗಳಾದ ಫೀಲ್ಡ್ ಮಾರ್ಷಲ್ ಕೊಡಂದೇರ ಕಾರ್ಯಪ್ಪ ಹಾಗೂ ಜನರಲ್ ಕೊಡಂದೇರ ತಿಮ್ಮಯ್ಯ ಅವರಿಗೆ ಸರಕಾರ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ನೀಡಲು ಮೀನಾಮೇಷ ಎಣಿಸುತ್ತಿರುವ ಬಗ್ಗೆ ಖಂಡನಾ ನಿರ್ಣಯ ಕೈಗೊಂಡಿರುವ ಅಖಿಲ ಕೊಡವ ಸಮಾಜ, ಇವರಿಬ್ಬರಿಗೆ ಭಾರತ ರತ್ನ ಪದವಿ ನೀಡುವಂತೆ ಒತ್ತಾಯಿಸಿದೆ.
ವೀರಾಜಪೇಟೆಯ ಅಖಿಲ ಕೊಡವ ಸಮಾಜ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಜಿಲ್ಲೆಯ ವಿವಿಧ ಕೊಡವ ಸಮಾಜಗಳು, ವಿವಿಧ ನಾಡಿನ ತಕ್ಕ ಮುಖ್ಯಸ್ಥರು ಸೇರಿದಂತೆ ಬಹುತೇಕ ಕೊಡವ ಕುಟುಂಬದ ಪ್ರತಿನಿಧಿಗಳು ಮಹಾಸಭೆಯಲ್ಲಿ ಭಾಗವಹಿಸಿ ಹಲವಾರು ವಿಷಯಗಳ ಬಗ್ಗೆ ಚರ್ಚಿಸಿದರಲ್ಲದೆ ಹತ್ತು ಹಲವು ನಿರ್ಣಯಗಳನ್ನು ಸರ್ವಾನುಮತದಿಂದ ಅಂಗೀಕರಿಸಿದರು.
ಗಣನೆಗೆ ತೆಗೆದುಕೊಳ್ಳಬೇಕು: ಸರಕಾರ, ಜಿಲ್ಲಾಡಳಿತ ಅಥವಾ ಜನಪ್ರತಿನಿಧಿಗಳು ಕೊಡವ ಜನಾಂಗದ ಕುರಿತು ಅಥವಾ ವಿಶೇಷವಾಗಿ ತಲಕಾವೇರಿಯ ತುಲಾಸಂಕ್ರಮಣದ ಕುರಿತು ಯಾವುದೇ ನಿರ್ಣಯ ಕೈಗೊಳ್ಳಬೇಕಾದರೆ ಮೊದಲು ಅಖಿಲ ಕೊಡವ ಸಮಾಜದ ಗಣನೆಗೆ ತಂದು ಸಮಾಜದ ಪ್ರಮುಖರನ್ನು ಕರೆದು ಸಭೆ ನಡೆಸಬೇಕು ಎಂದು ಅಖಿಲ ಕೊಡವ ಸಮಾಜ ಒತ್ತಾಯಿಸಿದೆ.
ಇತರ ಜನಾಂಗಕ್ಕೆ ಮಠಗಳು ಹೇಗೆ ಪ್ರಮುಖ ಪಾತ್ರ ವಹಿಸುತ್ತದೆಯೋ, ಹಾಗೆಯೇ ಕೊಡವ ಜನಾಂಗಕ್ಕೆ ಅಖಿಲ ಕೊಡವ ಸಮಾಜ ಜನಾಂಗದ ಮಾತೃ ಸಂಸ್ಥೆಯಾಗಿದೆ. ಕೊಡವರ ಮನೆಯಲ್ಲಿ ಜನಿಸಿದ ಪ್ರತಿ ಮಗು ಕೂಡಾ ಅಖಿಲ ಕೊಡವ ಸಮಾಜದ ಸದಸ್ಯನಾಗುತ್ತಾನೆ. ಹೀಗಿರುವಾಗ ಅಖಿಲ ಕೊಡವ ಸಮಾಜದ ಕಡೆಗಣನೆ ಸರಿಯಲ್ಲ ಎಂಬ ಮಾತು ಸಭೆಯಲ್ಲಿ ಕೇಳಿ ಬಂದಿತು. ಇದಕ್ಕೆ ಸಭೆ ಸರ್ವಾನುಮತದಿಂದ ಒಪ್ಪಿಗೆ ನೀಡಿತು.
ಡಾಕ್ಟರೇಟ್ ನೀಡಲಿ:
ಕೊಡವ ಜನಾಂಗದ ಹಿರಿಯ ಸಾಹಿತಿ ಹಾಗೂ ಕೊಡವ ಜಾನಪದ ತಜ್ಞರೂ ಆಗಿರುವ ಬಾಚರಣಿಯಂಡ ಅಪ್ಪಣ್ಣ ಅವರಿಗೆ ಮಂಗಳೂರು ವಿಶ್ವ ವಿದ್ಯಾಲಯದಿಂದ ನೀಡಲಾಗುವ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಬೇಕು, ಕೊಡಗಿನ ಪ್ರಮುಖ ಹಬ್ಬಗಳಾದ ಕಾವೇರಿ ತುಲಾಸಂಕ್ರಮಣ ಹಾಗೂ ಪುತ್ತರಿ ಹಬ್ಬಕ್ಕೆ ತಲಾ ಎರಡೆರಡು ದಿವಸ ಸರಕಾರ ರಜೆ ನೀಡುವಂತೆ ಹಾಗೂ ಇದರಲ್ಲಿ ಒಂದೊಂದು ದಿವಸ ಸಾರ್ವತ್ರಿಕ ರಜೆಯನ್ನು ನೀಡಬೇಕು ಎಂದು ಸಭೆ ಒತ್ತಾಯಿಸಿ ನಿರ್ಣಯ ಕೈಗೊಂಡಿತು.
ಸಭೆಯಲ್ಲಿ ಬಹಳಷ್ಟು ವಿಷಯಗಳು ಚರ್ಚೆಗೆ ಬಂದು ಬಹುತೇಕ ವಿಷಯಗಳು ನಿರ್ಣಯಗಳಾದವು. ಸಭೆಯಲ್ಲಿ ಮಂದ್ ಮಾನಿ ಕೊಡವರ ಸ್ಮಶಾನಗಳ ಬಗ್ಗೆ ಇದರಲ್ಲಿ ಸರಕಾರ ಅಥವಾ ಪಂಚಾಯತ್ ಪ್ರವೇಶದ ಬಗ್ಗೆ ಚರ್ಚೆ ನಡೆದು, ಕೊಡವರ ಮಂದ್ ಮಾನಿ ಸೇರಿದಂತೆ ಕೊಡವರ ಸ್ಮಶಾನಗಳನ್ನು ಕೊಡವರಿಗಾಗಿಯೇ ಕಾಯ್ದಿರಿಸಬೇಕು ಎಂದು ಒತ್ತಾಯಿಸಲಾಯಿತು.
ವೇದಿಕೆಯಲ್ಲಿ ಅಖಿಲ ಕೊಡವ ಸಮಾಜ ಉಪಾಧ್ಯಕ್ಷ ಅಜ್ಜಿಕುಟ್ಟೀರ ಮಾದಯ್ಯ ಸುಬ್ರಮಣಿ, ಸಹ ಕಾರ್ಯದರ್ಶಿ ನಂದೇಟಿರ ರಾಜ ಮಾದಪ್ಪ, ಖಜಾಂಚಿ ಮಂಡೇಪಂಡ ಸುಗುಣ, ಅಪ್ಪುಮಣಿಯಂಡ ತುಳಸಿ ಕಾಳಪ್ಪ, ಸೇರಿದಂತೆ ದೇಶ ತಕ್ಕರ ಕುಟುಂಬದವರಾದ ಪರದಂಡ ಸುಬ್ರಮಣಿ, ಬೊಳ್ಳೇರ ಪಿ ಅಪ್ಪಯ್ಯ, ಪರುವಂಡ ಪೊನ್ನಪ್ಪ, ಪಾಂಡೀರ ಗಣಪತಿ ಇತರರು ಉಪಸ್ಥಿತರಿದ್ದರು.
ಮಳವಂಡ ಪೂವಿ ಪ್ರಾರ್ಥಿಸಿದರೆ, ಉಪಾಧ್ಯಕ್ಷ ಅಜ್ಜಿಕುಟ್ಟೀರ ಮಾದಯ್ಯ ಸುಬ್ರಮಣಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಅಮ್ಮಣಿಚಂಡ ರಾಜ ನಂಜಪ್ಪ ವಂದಿಸಿದರು. 49 ವರ್ಷದ ಸುದೀರ್ಘ ಸೇವೆಗಾಗಿ ಮಹಾಸಭೆಯಲ್ಲಿ ಮಾತಂಡ ಮೊಣ್ಣಪ್ಪ ಅವರನ್ನು ಸನ್ಮಾನಿಸಲಾಯಿತು, ಈ ಸಂದರ್ಭ ಕಚೇರಿ ನಿರ್ವಾಹಕಿ ಮುಕ್ಕಾಟೀರ ರಶ್ಮಿ ವ್ಯಕ್ತಿ ಪರಿಚಯ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!