ʼಭರೋಸ್‌ʼ- ಐಐಟಿ ಮದ್ರಾಸ್‌ ಬೆಂಬಲಿತ ಸಂಸ್ಥೆಯೊಂದು ಕಂಡು ಹಿಡಿದಿದೆ ದೇಶೀಯ ಮೊಬೈಲ್‌ ಆಪರೇಟಿಂಗ್‌ ಸಿಸ್ಟಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಜಗತ್ತು 5G ಸಂಪರ್ಕಕ್ಕೆ ತೆರೆದುಕೊಳ್ಳುತ್ತ ವೇಗವಾಗಿ ಮೆಟಾವರ್ಸ್‌ ಕಡೆಗೆ ದಾಪುಗಾಲಿಡುತ್ತಿರೋ ಈ ಸಮಯದಲ್ಲಿ ಮೊಬೈಲ್‌ ಎಂಬುದೊಂದು ಅತ್ಯಂತ ಮೂಲಭೂತ ಅವಶ್ಯಕತೆಯಾಗಿ ಹೋಗಿದೆ ಎಂದರೆ ತಪ್ಪಾಗಲಾರದು. ಆಟವಾಡುವ ಪುಟ್ಟ ಮಗುವಿನಿಂದ ಹಿಡಿದು ವೃದ್ಧರವರೆಗೂ ಎಲ್ಲರ ಕೈಗೂ ಮೊಬೈಲ್‌ ಬೇಕೇ ಬೇಕು. ಆಂಡ್ರಾಯ್ಡ್‌ ಮತ್ತು ಐಫೋನ್‌ ನಂತಹ ಸ್ಮಾರ್ಟ್‌ ಪೋನ್‌ ಗಳು ಜನರಿಗೆ ಮೊಬೈಲ್‌ ಗೀಳು ಹಿಡಿಸಿಬಿಟ್ಟಿವೆ. ಹೀಗೆ ಅಂಟಿಕೊಂಡಿರುವ ಮೊಬೈಲ್‌ ತಂತ್ರಜ್ಞಾನ ವ್ಯವಸ್ಥೆಯಲ್ಲಿ ದಿನ ದಿನವೂ ಹೊಸ ಹೊಸ ಆವಿಷ್ಕಾರಗಳು ಆಗುತ್ತಲೇ ಇವೆ. ಭಾರತದ ಐಐಟಿ ಮದ್ರಾಸ್‌ ನಿಂದ ಬೆಂಬಲಿತವಾಗಿರುವ ಸಂಸ್ಥೆಯೊಂದು ಈಗ ಅಂತಹುದೇ ಸಾಧನೆ ಮಾಡಿದೆ. ದೇಶೀಯವಾಗಿ ಮೊಬೈಲ್‌ ಆಪರೇಟಿಂಗ್‌ ಸಿಸ್ಟಂ ಅನ್ನು ಕಂಡು ಹಿಡಿದು ಮೇಕ್‌ ಇಂಡಿಯಾ, ಆತ್ಮ ನಿರ್ಭರ ಭಾರತದ ಪರಿಕಲ್ಪನೆಗಳನ್ನು ನನಸಾಗಿಸಿದೆ.

ಐಐಟಿ ಮದ್ರಾಸ್‌ ನಿಂದ ಬೆಂಬಲಿತವಾಗಿರುವ JandK ಆಪರೇಷನ್ಸ್ ಪ್ರೈವೇಟ್ ಲಿಮಿಟೆಡ್ (JandKops) ಎಂಬ ಸಂಸ್ಥೆಯೊಂದು ʼಭರೋಸ್”‌ (BharOS) ಎಂಬ ಹೆಸರಿನ ಸ್ವದೇಶಿ ಮೊಬೈಲ್‌ ಆಪರೇಟಿಂಗ್‌ ಸಿಸ್ಟಂ ಅನ್ನು ಅಭಿವೃದ್ಧಿಪಡಿಸಿದೆ. ವಿಶೇಷವೆಂದರೆ ಈ ಆಪರೇಟಿಂಗ್‌ ಸಿಸ್ಟಂ ಜೊತೆ ಯಾವುದೇ ಡೀಫಾಲ್ಟ್‌ ಅಪ್ಲಿಕೇಷನ್ಸ್‌ ಗಳಿರುವುದಿಲ್ಲ. ಸಾಮಾನ್ಯವಾಗಿ ಆಂಡ್ರಾಯ್ಡ್‌ ಪೋನ್‌ ಗಳಲ್ಲಿ ಯೂಟ್ಯೂಬ್‌, ಕ್ರೋಮ್‌ ಸೇರಿದಂತೆ ಕೆಲ ಗೂಗಲ್‌ ಅಪ್ಲಿಕೇಷನ್‌ ಗಳಯ ಡೀಫಾಲ್ಟ್‌ ಆಗಿರುತ್ತವೆ ಇವುಗಳನ್ನು ತೆಗೆದುಹಾಕಲು ಬರೋದಿಲ್ಲ. ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಬಹುದಷ್ಟೇ ಆದರೆ ಅವುಗಳು ಮೊಬೈಲ್‌ನಲ್ಲಿ ಅಸ್ತಿತ್ವದಲ್ಲಿರುತ್ತವೆ. ಆದರೆ ಈ BharOS ನಲ್ಲಿ ಯಾವುದೇ ಡೀಫಾಲ್ಟ್‌ ಅಪ್ಲಿಕೇಷನ್‌ ಇರೋದಿಲ್ಲ. ಬಳಕೆದಾರರು ತಮಗೆ ಪರಿಚಯವಿಲ್ಲದ ಅಥವಾ ಅವರು ನಂಬದಿರುವ ಅಪ್ಲಿಕೇಶನ್‌ಗಳನ್ನು ಬಳಸಲು ಇದು ಒತ್ತಾಯಿಸುವುದಿಲ್ಲ.

ಪ್ರಸ್ತುತ ಈ ಸಿಸ್ಟಂ ಅನ್ನು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಯಶಸ್ವಿಯಾಗಿ ಪರೀಕ್ಷಿಸಿದ್ದಾರೆ. ಇದೊಂದು ಉತ್ತಮ ಆವಿಷ್ಕಾರವಾಗಿದ್ದು ಇದು ಯಶಸ್ವಿಯಾಗುವುದನ್ನು ತಡೆಯಲು ಪ್ರಪಂಚದಾದ್ಯಂತ ಅನೇಕರು ಪ್ರಯತ್ನಿಸಬಹುದ. ಆದರೆ ಹಿಂಜರಿಯುವ ಅಗತ್ಯವಿಲ್ಲ ಎಂದು ಪ್ರೋತ್ಸಾಹಿಸಿದ್ದಾರೆ. ಈ ಸಂಸ್ಥೆಗೆ ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್‌ಟಿ) ತನ್ನ ರಾಷ್ಟ್ರೀಯ ಮಿಷನ್ ಆನ್ ಇಂಟರ್ ಡಿಸಿಪ್ಲಿನರಿ ಸೈಬರ್-ಫಿಸಿಕಲ್ ಸಿಸ್ಟಮ್ಸ್ (ಎನ್‌ಎಂಐಸಿಪಿಎಸ್) ಅಡಿಯಲ್ಲಿ ಧನಸಹಾಯ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!