ಅಲೆಮಾರಿ ಜನಾಂಗದ ಜನರಿಗಾಗಿ ಶ್ರಮಿಸಿದ ಭಾಸ್ಕರದಾಸ್ ಎಕ್ಕಾರ್ ವಿಧಿವಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತ ಸರಕಾರದ ಸಾಮಾಜಿಕ ನ್ಯಾಯ ಹಕ್ಕುಗಳ ಸಬಲೀಕರಣ ಸಚಿವಾಲಯ ಡಿಎನ್‌ಟಿ – ಎನ್‌ಟಿ-ಎಸ್‌ಎನ್‌ಟಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಿ. ದೇವರಾಜ್ ಅರಸು ಪ್ರಶಸ್ತಿ ಪುರಸ್ಕೃತರಾಗಿದ್ದ ಭಾಸ್ಕರದಾಸ್ ಎಕ್ಕಾರು ನಿಧನರಾಗಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು.
ಶನಿವಾರ ಬೆಂಗಳೂರಿನಿಂದ ದಕ್ಷಿಣ ಕನ್ನಡ ಜಿಲ್ಲೆಯ ಕಟೀಲಿಗೆ ತನ್ನ ಇನೋವಾ ಕಾರಿನಲ್ಲಿ ವಾಪಸಾಗುತ್ತಿದ್ದಾಗ ಕುಣಿಗಲ್ ಬಳಿ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಬೆಂಗಳೂರಿನ ಜೈನ್ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ನಿಧನರಾದರು.
ಅವರು ಕರ್ನಾಟಕ ದಕ್ಷಿಣ ಪ್ರಾಂತದ ಧರ್ಮ ಜಾಗರಣ ಸಮನ್ವಯ ಪರಿಯೋಜನಾ ಸಹಪ್ರಮುಖ್ ಆಗಿದ್ದರು. ಎಕ್ಕಾರು ಗ್ರಾಮ ಪಂಚಾಯತಿನಿಂದ 2 ಬಾರಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಸಾರಿಗೆ ವ್ಯವಹಾರ, ಹೊಟೇಲ್ ಉದ್ಯಮಗಳಲ್ಲೂ ತೊಡಗಿಸಿಕೊಂಡಿದ್ದರು. ಕೃಷಿಕರಾಗಿದ್ದರು.
ರಾಜ್ಯ ಸಾಂಸ್ಕೃತಿಕ ಪ್ರಕೋಷ್ಠದಲ್ಲಿ ಸದಸ್ಯರಾಗಿ, ಕರ್ನಾಟಕ ರಾಜ್ಯ ಅಲೆಮಾರಿ-ಅರೆ ಅಲೆಮಾರಿ ವಿಮುಕ್ತ ಬುಡಕಟ್ಟುಗಳ ಒಕ್ಕೂಟದ ರಾಜ್ಯಾಧ್ಯಕ್ಷರಾಗಿ, ಕರ್ನಾಟಕ ರಾಜ್ಯ ಚೆನ್ನದಾಸರ್ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷರಾಗಿ, ಆರ್‌ಎಸ್‌ಎಸ್‌ನ ಕರ್ನಾಟಕ ದಕ್ಷಿಣ ಪ್ರಾಂತದ ಧರ್ಮ ಜಾಗರಣ ಸಮನ್ವಯ ಪರಿಯೋಜನಾ ಸಹಪ್ರಮುಖ್ ಕಾರ್‍ಯನಿರ್ವಹಿಸುತ್ತಿದ್ದರು. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಅವರು ಅಲೆಮಾರಿ ಜನಾಂಗದ ಜನರ ಅಭಿವೃದ್ಧಿಗೆ ನಿರಂತರವಾಗಿ ಕೆಲಸ ಮಾಡಿದ್ದರು. ಕಟೀಲು ಬ್ರಹ್ಮಕಲಶೋತ್ಸವ ಸಮಿತಿಯಲ್ಲಿ ಸಕ್ರಿಯರಾಗಿ ಕಾರ್ಯನಿರ್ವಹಿಸಿದ್ದರು. ಕಟೀಲು ಪ್ರತಿಷ್ಠಾನ ಮುಂತಾದ ಸಂಘ ಸಂಸ್ಥೆಗಳಲ್ಲಿ ಕ್ರಿಯಾಶೀಲರಾಗಿದ್ದರು.
ಕಳೆದ ಒಂದು ವಾರದಿಂದ ಮಹಾರಾಷ್ಟ್ರ, ಬೆಂಗಳೂರಿನಲ್ಲಿ ಪ್ರಾಧಿಕಾರದ ಕುರಿತು ಸಭೆಗಳಲ್ಲಿ ಭಾಗವಹಿಸಿ, ತನ್ನ ಮನೆ ಕಟೀಲಿಗೆ ವಾಪಸಾಗುವ ಸಂದರ್ಭ ಅಪಘಾತ ನಡೆದಿತ್ತು. ಪತ್ನಿ, ಮೂವರು ಪುತ್ರರನ್ನು ಅಗಲಿದ್ದಾರೆ.
ಸಂತಾಪ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಮೂಲ್ಕಿ – ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಹಾಗೂ ಕಟೀಲಿನ ಅರ್ಚಕ ಶ್ರೀಅನಂತಪದ್ಮನಾಭ ಆಸ್ರಣ್ಣ ಮುಂತಾದವರು ಸಂತಾಪ ಸೂಚಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!