ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿ ಸಾಮಾಜಿಕ ಹೋರಾಟಗಾರ ಗೌತಮ್ ನವಲಖಾ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಬುಧವಾರಕ್ಕೆ ಮುಂದೂಡಿದೆ.
ನವಲಖಾ ಜಾಮೀನು ಅರ್ಜಿಯನ್ನು ಫೆಬ್ರವರಿ 8 ರಂದು ಬಾಂಬೆ ಹೈಕೋರ್ಟ್ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಫೆಬ್ರವರಿ 19 ರಂದು ನವಲಖಾ, ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.
ಇದೀಗ ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಯು.ಯು ಲಲಿತ, ಇಂದಿರಾ ಬ್ಯಾನರ್ಜಿ ಮತ್ತು ಕೆ.ಎಂ ಜೋಸೆಫ್ ಅವರ ಪೀಠವು ನವಲಖಾ ಅವರ ಅರ್ಜಿ ವಿಚಾರಣೆಯನ್ನು ಮಾರ್ಚ್ 3 ರಂದು ನಡೆಸುವುದಾಗಿ ಹೇಳಿದೆ.
ಎಲ್ಗಾರ್ ಪರಿಷದ್-ಮಾವೊ ನಡುವೆ ಸಂಪರ್ಕ ಇದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನವಲಖಾ ಅವರನ್ನು ಬಂಧಿಸಲಾಗಿತ್ತು. ಡಿಸೆಂಬರ್ 31, 2017ರಲ್ಲಿ ಪುಣೆಯಲ್ಲಿ ನಡೆದ ಎಲ್ಗಾರ್ ಪರಿಷದ್ ಸಭೆಯಲ್ಲಿ ಹೋರಾಟಗಾರರೊಬ್ಬರು ಮಾಡಿದ ಭಾಷಣವು ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಪ್ರಚೋದನೆ ನೀಡಿತ್ತು. ಇದು ಮಾವೋವಾದಿಗಳ ಬೆಂಬಲಿತ ಸಭೆಯಾಗಿತ್ತು ಎಂಬುದಾಗಿ ಪ್ರಕರಣ ದಾಖಲಿಸಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದರು.