ಇಂದು ಭೀಮನ ಅಮಾವಾಸ್ಯೆ: ವ್ರತದ ಆಚರಣೆ, ಪೂಜಾ ವಿಧಾನ ಹೇಗಿರಬೇಕು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆಷಾಢ ಮಾಸದ ಕೊನೆಯ ಅಮಾವಾಸ್ಯೆಯನ್ನು ಭೀಮನ ಅಮಾವಾಸ್ಯೆ ಅಂತಲೂ ಕರೆಯುತ್ತಾರೆ. ಇಂದು ಮುತ್ತೈದೆಯರು ತಮ್ಮ ಪತಿಯ ಆಯಸ್ಸು, ಆರೋಗ್ಯ, ಹೆಚ್ಚಾಗಲೆಂದು ಪರಶಿವ ಹಾಗೂ ಗೌರಿ ದೇವಿಯ ಜಪಿಸುತ್ತಾ ಮಾಡುವ ಪೂಜೆಯಾಗಿದೆ. ಸಾಮಾನ್ಯವಾಗಿ ಭೀಮನ ಅಮಾವಾಸ್ಯೆ ಅಂದರೆ ಮಹಾಭಾರತದಲ್ಲಿ ಬರುವ ಭೀಮನ ಹಾಗೆ ಇರಬೇಕೆಂದು ಮಾಡುವ ಪೂಜೆ ಎಂದು ತಿಳಿದುಕೊಂಡಿರುತ್ತಾರೆ. ಇಲ್ಲಿ ಭೀಮಸೇನೆ ಎಂದರೆ ಸರ್ವ ಸದ್ಗುಣ ಸಂಪನ್ನನಾಗಿರುವ ಶಿವನನ್ನು ಭೀಮ ಎಂದು ಪೂಜಿಸಲಾಗುತ್ತದೆ. ಒಂದು ದೀಪದಲ್ಲಿ ಶಿವನನ್ನು ಆವಾಹಿಸಿ ಪೂಜೆ ಮಾಡುವುದರಿಂದ ಇದನ್ನು ʻಜ್ಯೋತಿರ್ಭೀಮೇಶ್ವರ ವ್ರತʼ ಎಂದೂ ಸಹ ಕರೆಯಲಾಗುತ್ತದೆ.

ವಿವಾಹಿತ ಮಹಿಳೆಯರು ಸೌಭಾಗ್ಯವನ್ನು ಗಟ್ಟಿಯಾಗಿಸಿಕೊಳ್ಳಲು ಈ ದಿನ ಅತ್ಯಂತ ನಿಷ್ಟೆಯಿಂದ ಈ ವ್ರತವನ್ನು ಆಚರಿಸುತ್ತಾರೆ. ಈ ದಿನ ಕೆಲವೆಡೆ ‘ಜ್ಯೋತಿ ಪೂಜೆ’ ನಡೆಯುತ್ತದೆ. ಮುಂಜಾನೆಯೇ ಸ್ನಾನ ಮುಗಿಸಿ ಮನೆಯಲ್ಲಿ ದೇವರ ಮನೆ ಅಥವಾ ಒಂದು ವೇದಿಕೆ ಸಿದ್ದಪಡಿಸಿ, ರಂಗೋಲಿ ಹಾಕಿ, ಗಂಧ ಪುಷ್ಟಗಳಿಂದ ಅಲಂಕರಿಸಿ ಮಧ್ಯದಲ್ಲಿ ದೀಪಗಳನ್ನು ಹಚ್ಚಿ ಸಿಹಿಯನ್ನು ನೈವೇದ್ಯವಾಗಿ ಅರ್ಪಿಸುತ್ತಾರೆ. ಬ್ರಾಹ್ಮಣರಿಗೆ ತಾಂಬೂಲ ನೀಡಿ ಆಶಿರ್ವಾದ ಪಡೆಯುವುದರಿಂದ ಅದೃಷ್ಟ ಬರುತ್ತದೆ ಎಂದು ನಂಬಲಾಗಿದೆ.

ಈ ದಿನದಂದು ಎಲ್ಲಾ ಮಹಿಳೆಯರು ಗೌರಿ ದೇವಿಯನ್ನು ಪೂಜಿಸುತ್ತಾರೆ ಮತ್ತು ಅಕ್ಕಿ ಹಿಟ್ಟು ಮತ್ತು ಹಾಲನ್ನು ಬೆರೆಸಿ ಸಣ್ಣ ಉಂಡೆಗಳಾಗಿ ಮಾಡಿ ದೇವಿಗೆ ನಿವೇದಿಸುತ್ತಾರೆ. ಕೆಲವೆಡೆ ನವ ವಧು ಬೆಳಿಗ್ಗೆಯಿಂದ ಸಂಜೆಯವರೆಗೆ ಉಪವಾಸವಿದ್ದು. ಸಂಜೆ ಅಮ್ಮನಿಗೆ ಪೂಜೆ ಸಲ್ಲಿಸುತ್ತಾರೆ. ಇದಾದ ಬಳಿಕ ವಿವಾಹಿತ ಮಹಿಳೆ ತನ್ನ ಪತಿಯ ಪಾದಪೂಜೆ ನಡೆಸಿ ನಮಸ್ಕರಿಸಿ ಆಶೀರ್ವಾದ ಪಡೆಯುತ್ತಾಳೆ. ತನ್ನ ಪತಿಗೆ ದೀರ್ಘಾಯುಷ್ಯ, ಸಂಪತ್ತು, ಆರೋಗ್ಯ ಕರುಣಿಸುವಂತೆ ದೇವರಲ್ಲಿ ಪ್ರಾರ್ಥಿಸುವ ದಿನವಿದು. ಕನ್ಯೆಯರು ಸಹ ಶಿವ, ಗೌರಿಯನ್ನು ಆರಾಧಿಸಿ ಹೆತ್ತವರ ಆಶೀರ್ವಾದ ಪಡೆಯುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!