ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ವರದಿ, ಕೊಡಗು:
ಚಿತ್ರನಟ ಭುವನ್ ಹಾಗೂ ನಟಿ ಹರ್ಷಿಕಾ ಪೂಣಚ್ಚ ಅವರ ಭುವನಂ ಫೌಂಡೇಷನ್ ವತಿಯಿಂದ ಗ್ರೀನ್ ಸಿಟಿ ಫೋರಂ ಸಹಯೋಗದಲ್ಲಿ ನೀಡಲಾದ 50 ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನು ಕಂದಾಯ ಸಚಿವ ಆರ್.ಅಶೋಕ್ ಅವರು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದರು.
ಇದರೊಂದಿಗೆ ‘ಜೀವ ಬೇಕು ಲಸಿಕೆ ಹಾಕು ಲಸಿಕಾ ಅಭಿಯಾನ, ಜಾಗೃತಿ ವಾಹನಗಳಿಗೆ ಇದೇ ಸಂದರ್ಭ ಸಚಿವರು ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಸಚಿವರು, ಇಂದಿನ ಯುವಕರು ಎತ್ತರದ ಸ್ಥಾನಕ್ಕೆ ಹೋದ ಬಳಿಕ ತಮ್ಮ ಮೂಲವನ್ನು ಮರೆಯುತ್ತಿದ್ದಾರೆ. ಆದರೆ ಭುವನ್ ಪೊನ್ನಣ್ಣ ಅವರು ಸಾಮಾಜಿಕ ಸೇವೆ ಮಾಡುತ್ತಾ ನಿಜ ಜೀವನದಲ್ಲೂ ಹೀರೋ ಆಗಿದ್ದಾರೆ. ಹುಟ್ಟಿದ ನಾಡನ್ನು ಮರೆಯದೆ ಸಂಕಷ್ಟದ ಸಮಯದಲ್ಲಿ ಸೇವಾ ಕಾರ್ಯದಲ್ಲಿ ತೊಡಗಿಸಿ ಕೊಂಡಿರುವುದು ಶ್ಲಾಘನೀಯ ಎಂದರು.
ಮನರಂಜನಾ ಮಾಧ್ಯಮ ಅತ್ಯಂತ ಪರಿಣಾಮಕಾರಿಯಾಗಿದ್ದು, ತಮ್ಮ ಸ್ವಂತ ಹಣವನ್ನು ಸಮಾಜಕ್ಕೆ ವ್ಯಯಿಸುತ್ತಿರುವುದು ಮಾದರಿಯಾಗಿದೆ.ಕೋವಿಡ್ ಪರಿಸ್ಥಿತಿಯಲ್ಲಿ ಮಾನವೀಯತೆ ಅನಾವರಣಗೊಂಡಿದೆ ಎಂದು ಹೇಳಿದರು.
ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಭುವನ್ ಪೊನ್ನಣ್ಣ ತಮ್ಮ ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ಮತ್ತಷ್ಟು ಬೆಳವಣಿಗೆ ಸಾಧಿಸಲಿ ಎಂದು ಆಶಿಸಿದರು.
ಫೌಂಡೇಷನ್ ಸಂಸ್ಥಾಪಕ ಭುವನ್ ಪೊನ್ನಣ್ಣ ಮಾತನಾಡಿ, 14 ಜಿಲ್ಲೆಗಳ 25 ಸಾವಿರ ಕುಟುಂಬಗಳಿಗೆ ಆಹಾರ ಕಿಟ್, ಔಷಧಿ, ಮಾಸ್ಕ್ ವಿತರಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಅಭಿಯಾನ ತಂಡ ಮಾಡಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಕೆ.ಜಿ. ಬೋಪಯ್ಯ, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಉಪವಿಭಾಗಾಧಿಕಾರಿ ಈಶ್ವರ್ ಕುಮಾರ್ ಖಂಡು, ಹೋಂಸ್ಟೇ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಅನಂತ ಶಯನ, ಗ್ರೀನ್ ಸಿಟಿ ಫೋರಂ ಸಂಸ್ಥಾಪಕ ಚೆಯ್ಯಂಡ ಸತ್ಯ ಇನ್ನಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಆರ್. ಅಶೋಕ್ ಹುಟ್ಟು ಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.