ಹೊಸ ದಿಗಂತ ಆನ್ಲೈನ್ ಡೆಸ್ಕ್:
ಚೆನೈ-ಮಂಗಳೂರು ನಡುವೆ ಸಂಚರಿಸುವ ಸೂಪರ್-ಫಾಸ್ಟ್ ರೈಲಿನಲ್ಲಿ ಭಾರೀ ಪ್ರಮಾಣದ ಸ್ಫೋಟಕ ವಸ್ತುಗಳು ಪತ್ತೆಯಾಗಿದ್ದು, ಈ ವಸ್ತುಗಳನ್ನು ಕೋಜಿಕ್ಕೋಡ್ನಲ್ಲಿ ವಶಪಡಿಸಿಕೊಳ್ಳಲಾಗಿದೆ.
ಈ ರೈಲಿನಲ್ಲಿ 117 ಜಿಲೆಟಿನ್ ಸ್ಟಿಕ್, 350 ಡಿಟರ್ನೇಟರ್ಗಳನ್ನು ಸಾಗಾಟ ನಡೆಸಲಾಗುತ್ತಿತ್ತು. ಈ ಸಂಬಂಧ ಮಹಿಳೆಯೊಬ್ಬಳನ್ನು ಅಧಿಕಾರಿಗಳು ವಶಕ್ಕೆತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ. ವಶಪಡಿಸಿಕೊಂಡ ಸ್ಫೋಟಕ ವಸ್ತುಗಳಿಗೆ ಹಾಗೂ ವಶಕ್ಕೆ ತೆಗೆದುಕೊಂಡಿರುವ ಮಹಿಳೆಗೆ ಸಂಬಂಧ ಇದೆಯೇ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.
ಸ್ಫೋಟಕ ಸಾಮಾಗ್ರಿ ಸಾಗಾಟ ನಡೆಸಲಾಗುತ್ತಿದೆ ಎಂಬ ಬಗ್ಗೆ ಸಿಕ್ಕಿದ ಮಾಹಿತಿ ಹಿನ್ನೆಲೆಯಲ್ಲಿ ರೈಲು ಕೋಜಿಕ್ಕೋಡ್ ನಿಲ್ದಾಣಕ್ಕೆ ತಲಪುತ್ತಿದ್ದಂತೆಯೇ ರೈಲ್ವೇ ಪೊಲೀಸರು ಶೋಧ ಕಾರ್ಯ ಕೈಗೆತ್ತಿಕೊಂಡರು. ಈ ವೇಳೆ ಸೀಟಿನ ಕೆಳ ಭಾಗದಲ್ಲಿ ಪೆಟ್ಟಿಗೆಗಳಲ್ಲಿ ಬಚ್ಚಿಡಲಾಗಿದ್ದ ಈ ವಸ್ತುಗಳು ಪತ್ತೆಯಾಗಿವೆ.
ಪೊಲೀಸ್ ವಶದಲ್ಲಿರುವ ಮಹಿಳೆ ಚೆನ್ನೈಯಿಂದ ಕಣ್ಣೂರಿನ ತಲಶ್ಯೇರಿಗೆ ಬರುತ್ತಿದ್ದರು ಎನ್ನಲಾಗಿದೆ. ಈಕೆ ಕುಳಿತಿದ್ದ ಸೀಟಿನ ಕೆಳಭಾಗದಲ್ಲಿ ಸ್ಫೋಟಕ ಸಿಕ್ಕಿದ್ದು, ಈಕೆಗೂ ಸೋಟಕ ವಸ್ತುಗಳಿಗೂ ಸಂಬಂಧ ಇದೆಯೇ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.