Thursday, June 30, 2022

Latest Posts

ಸಿಎಂ ಬದಲಾದರೆ ಬಿಜೆಪಿಗೆ ದೊಡ್ಡ ನಷ್ಟ: ಡಾ.ಶಿವಮೂರ್ತಿ ಮುರುಘಾ ಶರಣರು

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………

ಹೊಸದಿಗಂತ ವರದಿ,ಚಿತ್ರದುರ್ಗ:

ರಾಜ್ಯದ ಮುಖ್ಯಮಂತ್ರಿ ಬದಲಾದರೆ ಯಡಿಯೂರಪ್ಪ ಅವರಿಗೇನೂ ನಷ್ಟವಿಲ್ಲ. ಆದರೆ ಬಿಜೆಪಿ ಪಕ್ಷಕ್ಕೆ ದೊಡ್ಡ ನಷ್ಟ. ಇದ್ದಕ್ಕಿದ್ದಂತೆ ಒಬ್ಬ ನಾಯಕ ಹುಟ್ಟುವುದಿಲ್ಲ. ಯಡಿಯೂರಪ್ಪ ಅವರನ್ನು ಮಧ್ಯದಲ್ಲಿ ಬದಲಾಯಿಸಿದರೆ ತೊಂದರೆಯಾಗುವುದು ಖಚಿತ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.
ಇಲ್ಲಿನ ಮುರುಘಾಮಠದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಯಸ್ಸನ್ನು ಮೀರಿ ಯುವಕರಂತೆ ಕೆಲಸ ಮಾಡುತ್ತಿದ್ದಾರೆ. ಅವರ ಕಾರ್ಯವೈಖರಿ ಅದ್ಭುತವಾದದ್ದು. ಅವರ ರಾಜಕೀಯ ಅನುಭವ ಅಮೋಘವಾದುದು. ಪಕ್ಷದೊಳಗೆ ತೊಂದರೆಯಾಗಬಾರದು. ಅವರು ಶಕ್ತಿ ತೋರಿಸಬಲ್ಲರು. ಅಂತಹ ಮುತ್ಸದ್ಧಿ. ಅವರೊಬ್ಬ ಮಾಸ್ ಲೀಡರ್ ಎಂದು ಹೇಳಿದರು.
ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಕೊರೋನಾ ಸಂದರ್ಭದಲ್ಲಿ ಚಾಕಚಕ್ಯತೆಯಿಂದ ಗಂಭೀರ ಪರಿಸ್ಥಿತಿಯನ್ನು ಮಾನವೀಯತೆಯಿಂದ ನಿಭಾಯಿಸಿದ್ದಾರೆ. ಕೇಂದ್ರ ಸರ್ಕಾರವು ಸಹ ಮುಖ್ಯಮಂತ್ರಿಗಳ ಕಾರ್ಯವೈಖರಿ ಶ್ಲಾಘಿಸಿದೆ. ಎಲ್ಲಿಯೂ ವಿಚಲಿತರಾಗದೆ ಮುಂಜಾಗ್ರತೆ ವಹಿಸಿ ಕೊರೋನಾ ನಿಯಂತ್ರಿಸಿದ್ದಾರೆ. ಈ ಸಂದರ್ಭದಲ್ಲಿ ನಾಯಕತ್ವದ ಬದಲಾವಣೆ ವಿಚಾರವು ರಾಜ್ಯದ ಜನರಲ್ಲಿ ಆತಂಕ ಸೃಷ್ಟಿಸಿದೆ. ಮುಖ್ಯಮಂತ್ರಿಗಳು ಬದಲಾದರೆ ನಾಡಿನ ಸಮಸ್ತ ಮಠಾಧೀಶರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ನೋಡೋಣ ಎಂದರು.
ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಮಾತನಾಡಿ, ದಕ್ಷಿಣ ಭಾರತದಲ್ಲಿ ಪ್ರಥಮವಾಗಿ ಪಕ್ಷವನ್ನು ಅಧಿಕಾರಕ್ಕೆ ತಂದವರು ಯಡಿಯೂರಪ್ಪ. ಅವರು ಅಧಿಕಾರಕ್ಕೆ ಬಂದ ನಂತರ ಎಲ್ಲ ಶೋಷಿತ ಸಮುದಾಯದ ಮಠಗಳನ್ನು ಮೇಲೆತ್ತಿದರು. ಅಧಿಕಾರ ವಹಿಸಿಕೊಂಡ ನಂತರ ಅವರಿಗೆ ಅನೇಕ ಸಮಸ್ಯೆಗಳು ಸುತ್ತಿಕೊಳ್ಳುತ್ತಿವೆ. ಅತಿವೃಷ್ಟಿ, ಅನಾವೃಷ್ಟಿ, ಕೊರೋನಾ ಎಲ್ಲವೂ ಬಂದರೂ ಅವೆಲ್ಲವನ್ನು ಧೈರ್ಯವಾಗಿ ಎದುರಿಸಿದ್ದಾರೆ. ಈ ಅವಧಿಯನ್ನು ಸಂಪೂರ್ಣವಾಗಿ ಮುಗಿಸಲು ಅವಕಾಶ ಮಾಡಿಕೊಡಬೇಕು ಎಂದರು.
ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ ಮಾತನಾಡಿ, ಎಲ್ಲ ಸಮುದಾಯದವರಿಗೆ ಮಠ ಕಟ್ಟಿಕೊಟ್ಟವರು ಮುರುಘಾ ಶರಣರು. ಆದರೆ ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದವರು ಯಡಿಯೂರಪ್ಪ. ಕರ್ನಾಟಕದಲ್ಲಿ ಬಿಜೆಪಿ ಬಂದಿದ್ದರೆ ಅದು ಯಡಿಯೂರಪ್ಪನವರ ಶ್ರಮ. ಎಲ್ಲ ಸಮುದಾಯವನ್ನು ತನ್ನೊಟ್ಟಿಗೆ ಕರೆದುಕೊಂಡು ಹೋಗುತ್ತಿದ್ದಾರೆ. ಮಧ್ಯದಲ್ಲಿ ಅವರ ಗೌರವಕ್ಕೆ ಧಕ್ಕೆ ತರಬಾರದು. ಅವರನ್ನು ಮುಂದುವರಿಸಬೇಕು. ಅವರ ಜೊತೆ ನಾವೆಲ್ಲ ಇರುತ್ತೇವೆ. ಅವರಿಗೆ ನೈತಿಕ ಬೆಂಬಲ ನೀಡುತ್ತೇವೆ ಎಂದು ಹೇಳಿದರು.
ಭೋವಿ ಗುರುಪೀಠದ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ, ಯಡಿಯೂರಪ್ಪನವರು ಬರೀ ಲಿಂಗಾಯತ ಸಮುದಾಯದ ನಾಯಕರಲ್ಲ. ಅವರು ಸರ್ವ ಸಮುದಾಯದ ನಾಯಕರು. ಅವರ ಭರವಸೆಗಳು ಸಂಪೂರ್ಣವಾಗಿ ಈಡೇರಿವೆ. ಪೂರ್ಣ ಪ್ರಮಾಣದ ಸರ್ಕಾರ ಮುಂದುವರೆಯಬೇಕು. ಕಾರಣ ಅವರ ಹಿಂದೆ ಮಠಾಧೀಶರು, ಸಮುದಾಯ, ಜನಬೆಂಬಲ ಇದೆ. ಅವರ ಮೇಲೆ ಎಲ್ಲರ ಆಶೀರ್ವಾದ ಇದೆ. ಹೈಕಮಾಂಡ್ ಕೂಡ ಯೋಚಿಸಿ ನಿರ್ಧರಿಸಬೇಕೆಂದು ಒತ್ತಾಯಿಸಿದರು.
ಇಳಕಲ್‌ನ ಗುರುಮಹಾಂತೇಶ್ವರ ಮಠದ ಶ್ರೀ ಗುರುಮಹಾಂತ ಸ್ವಾಮಿಗಳು ಮಾತನಾಡಿ, ಯಾವುದೇ ಜಾತಿ ಧರ್ಮವನ್ನು ನೋಡದೆ ಎಲ್ಲರನ್ನೂ ಸಮಾನವಾಗಿ ಯಡಿಯೂರಪ್ಪನವರು ಕಂಡಿದ್ದಾರೆ. ಅವರನ್ನು ಅವಧಿಪೂರ್ಣಗೊಳಿಸಲು ಬಿಡಬೇಕೆಂದರು.
ಸುದ್ದಿಗೋಷ್ಠಿಯಲ್ಲಿ ಇಳಕಲ್‌ನ ಗುರುಮಹಾಂತ ಸ್ವಾಮೀಜಿ, ಅಥಣಿಯ ಶಿವಬಸವ ಸ್ವಾಮೀಜಿ, ಶಿರಸಿಯ ಮಲ್ಲಿಕಾರ್ಜುನ ಸ್ವಾಮೀಜಿ, ಸತ್ತಿಮಠದ ಸ್ವಾಮೀಜಿ, ಚಳ್ಳಕೆರೆಯ ಬಸವಕಿರಣ ಸ್ವಾಮೀಜಿ, ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ ಮತ್ತಿತರರು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss