ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಫೆಬ್ರವರಿ 1 ರಂದು ಕೇಂದ್ರ ಬಜೆಟ್ ಮಂದನೆಯಾಗಲಿದ್ದು, ಈ ಬಾರಿ ಕೊರೋನಾ ಕಾರಣದಿಂದ ಸರ್ಕಾರ ಬಜೆಟ್ ಪುಸ್ತಕ ಮುದ್ರಿಸದಿರಲು ನಿರ್ಧಾರ ಕೈಗೊಂಡಿದೆ.
ಕೊರೋನ ಮಾರ್ಗಸೂಚಿ ಅನುಸರಿಸಿ ಈ ವರ್ಷ ಬೃಹತ್ ಬಜೆಟ್ ದಾಖಲೆಗಳನ್ನು ಮುದ್ರಿಸಲಾಗುವುದಿಲ್ಲ. ಸಂಸತ್ ಸದಸ್ಯರಿಗೆ ಎಲೆಕ್ಟ್ರಾನಿಕ್(ವಿದ್ಯುನ್ಮಾನ) ಬಳಕೆಗೆ ಸಾಫ್ಟ್ ಕಾಪಿ, ಪಿಡಿಎಫ್ ಫೈಲ್ ನೀಡಲಾಗುವುದು ಎಂದು ಹೇಳಲಾಗಿದೆ.
1947ರಿಂದ ಭಾರತದ ಮೊದಲ ಬಜೆಟ್ ಮಂಡನೆಯಾದ ನಂತರದಲ್ಲಿ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರದ ಆದಾಯ ಮತ್ತು ಖರ್ಚು ವೆಚ್ಚದ ಮಾಹಿತಿ ದಾಖಲೆಗಳನ್ನು ಮುದ್ರಿಸಲಾಗುತ್ತಿಲ್ಲ.
ಈ ಹಣಕಾಸು ವರ್ಷದಲ್ಲಿ ಕೇಂದ್ರ ಬಜೆಟ್ ದಾಖಲೆಗಳನ್ನು ಮುದ್ರಿಸದೇ ವಿದ್ಯುನ್ಮಾನವಾಗಿ ನೀಡಲಿದ್ದು, ಎಲ್ಲಾ ಸಂಸದರಿಗೆ ಬಜೆಟ್ ಸಾಫ್ಟ್ ಕಾಪಿಗಳನ್ನು ನೀಡಲಾಗುವುದು. ಸಾಮಾನ್ಯವಾಗಿ ಬಜೆಟ್ ಮುದ್ರಣಕ್ಕೆ ಎರಡು ವಾರಗಳ ಮೊದಲು ಹಣಕಾಸು ಸಚಿವಾಲಯದ ನೆಲಮಾಳಿಗೆಯ ಮುದ್ರಣಾಲಯದಲ್ಲಿ ಸಿಬ್ಬಂದಿ ಬಂಧಿಸಿಟ್ಟು ಬಜೆಟ್ ಕಾಪಿ ಮುದ್ರಿಸಲಾಗುತ್ತದೆ. ಹಲ್ವಾ ಸಮಾರಂಭದೊಂದಿಗೆ ಮುದ್ರಣ ಕಾರ್ಯ ಆರಂಭವಾಗುತ್ತದೆ. ಆದರೆ, ಈ ಸಲ ಬಜೆಟ್ ಕಾಪಿಯನ್ನು ಮುದ್ರಿಸುತ್ತಿಲ್ಲ ಎಂದು ಹೇಳಲಾಗಿದೆ.