ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಇಂದು ಎರಡನೇ ದಿನದ ಎಸ್ ಎಸ್ ಎಲ್ ಸಿ ಪರೀಕ್ಷೆ ಯಶಸ್ವಿಯಾಗಿ ನಡೆದಿದ್ದು, ಯಶಸ್ವಿಯಾಗಿ ಪರೀಕ್ಷೆ ಬರೆದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಕ್ಯಾಬಿನೆಟ್ ಸಭೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಅಭಿನಂದನೆ ಸಲ್ಲಿಸಿದರು.
ಬಳಿಕ ಈ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಎರಡನೇ ದಿನವಾದಂತ ಎಸ್ ಎಸ್ ಎಲ್ ಸಿ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ. ಯಾವುದೇ ಸಮಸ್ಯೆ ಇಲ್ಲದೇ ಪರೀಕ್ಷೆ ನಡೆಸಲಾಗಿದೆ. ಈ ಪರೀಕ್ಷೆಯಲ್ಲಿ ಹಾಜರಾಗದೇ ಇರುವಂತ ವಿದ್ಯಾರ್ಥಿಗಳಿಗೆ ಆಗಸ್ಟ್ ನಲ್ಲಿ ಪರೀಕ್ಷೆ ಮಾಡಲಾಗುತ್ತದೆ. ಯಾವುದೇ ವಿದ್ಯಾರ್ಥಿಗಳು ಹತಾಶರಾಗಬಾರದು ಎಂದರು.
ಅಗಸ್ಟ್ 10ರೊಳಗೆ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶವನ್ನು ಘೋಷಿಸಲಾಗುವುದು. ರಾಜ್ಯದಲ್ಲಿ 12 ಲಕ್ಷ ಪಿಯು ಸೀಟ್ಗಳು ಲಭ್ಯವಿದೆ. ಎಲ್ಲ ವಿದ್ಯಾರ್ಥಿಗಳಿಗೂ ಮುಂದಿನ ವರ್ಷಕ್ಕೆ ಸೀಟ್ಗಳು ಇವೆ ಎಂದು ಸಚಿವ ಸುರೇಶ್ಕುಮಾರ್ ತಿಳಿಸಿದರು.
ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸುವ ಕುರಿತಂತೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯು ವರದಿ ತಯಾರಿಸುತ್ತಿದೆ. ಆ ವರದಿಯನ್ನು ಆಧರಿಸಿ ಶಾಲೆ ಆರಂಭ ಕುರಿತಂತೆ ತೀರ್ಮಾನ ಕೈಗೊಳ್ಳಲಾಗುತ್ತದೆ. ಮುಂದಿನ ದಿನಗಳಲ್ಲಿ ತಾಂತ್ರಿಕ ಸಲಹಾ ಸಮಿತಿಯ ಸೂಚನೆ, ಆರೋಗ್ಯ ಇಲಾಖೆಯ ಸಲಹೆಯ ಮೇರೆಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.
ಇವತ್ತು ಭಾಷಾ ವಿಷಯಗಳಿಗೆ ಪರೀಕ್ಷೆ ನಡೆಸಲಾಯಿತು. ಇಂದು ನಡೆದ ಪರೀಕ್ಷೆಗೆ ಶೇಕಡಾ 99.65ರಷ್ಟು ಹಾಜರಾತಿಯಿತ್ತು. ಪ್ರಥಮ ಭಾಷೆಗೆ ಒಟ್ಟು 8,19,694 ವಿದ್ಯಾರ್ಥಿಗಳ ನೋಂದಣಿ ಮಾಡಿಕೊಂಡಿದ್ದರು. ಪ್ರಥಮ ಭಾಷೆ ಪರೀಕ್ಷೆಗೆ 7,83,881ವಿದ್ಯಾರ್ಥಿಗಳು ಹಾಜರಾಗಿದ್ದರು. ಪ್ರಥಮ ಭಾಷೆ ಪರೀಕ್ಷೆಗೆ 3350 ವಿದ್ಯಾರ್ಥಿಗಳ ಗೈರಾಗಿದ್ದಾರೆ. ದ್ವಿತೀಯ ಭಾಷೆಗೆ 8,27,988 ವಿದ್ಯಾರ್ಥಿಗಳು ನೋಂದಣಿ, ದ್ವಿತೀಯ ಭಾಷೆ ಪರೀಕ್ಷೆಗೆ 8,24,686 ಮಕ್ಕಳು ಹಾಜರಾಗಿದ್ದರು. ದ್ವಿತೀಯ ಭಾಷೆ ಪರೀಕ್ಷೆಗೆ 3302 ವಿದ್ಯಾರ್ಥಿಗಳು ಗೈರಾಗಿದ್ದಾರೆ. ತೃತೀಯ ಭಾಷೆಗೆ 8,17,640 ವಿದ್ಯಾರ್ಥಿಗಳು ನೋಂದಣಿ, 8,14,538 ಮಕ್ಕಳು ಹಾಜರು, 3102 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಕೊವಿಡ್ ಕೇರ್ ಸೆಂಟರ್ನಲ್ಲಿ 67 ಮಕ್ಕಳು ಪರೀಕ್ಷೆ ಬರೆದಿದ್ದಾರೆ. ವಿಶೇಷ ಕೊಠಡಿಯಲ್ಲಿ 152 ಮಕ್ಕಳು ಪರೀಕ್ಷೆ ಬರೆದಿದ್ದಾರೆ ಎಂದು ಅವರು ತಿಳಿಸಿದರು.
ಜುಲೈ.19 ಮತ್ತು ಜುಲೈ.22ರ ಇಂದಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶವನ್ನು ಆಗಸ್ಟ್ 10ರೊಳಗೆ ಪ್ರಕಟಿಸುವ ಸಿದ್ಧತೆ ಕೈಗೊಳ್ಳಲಾಗಿದೆ. ಆ ಕುರಿತಂತೆ ಸದ್ಯದಲ್ಲೇ ಮಾಹಿತಿಯನ್ನು ನೀಡಲಾಗುತ್ತದೆ. ಓವರ್ ಆಲ್ ಶೇ.99.69 ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಹಾಜರಾಗಿದ್ದಾರೆ ಎಂದು ಹೇಳಿದರು.