ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೋದಿ ಉಪನಾಮವನ್ನು ಉದ್ದೇಶಿಸಿ ಆಡಿದ್ದ ಮಾತಿಗೆ ಪ್ರತಿಯಾಗಿ ಮಾನನಷ್ಟ ಪ್ರಕರಣದಲ್ಲಿ ರಾಹುಲ್ ಗಾಂಧಿಯವರಿಗೆ ವಿಚಾರಣಾ ನ್ಯಾಯಾಲಯವು ವಿಧಿಸಿದ್ದ ಶಿಕ್ಷೆಗೆ ಶುಕ್ರವಾರ ಸುಪ್ರೀಂಕೋರ್ಟ್ ಮಧ್ಯಂತರ ತಡೆ ನೀಡಿದೆ. ಇದರೊಂದಿಗೆ ರಾಹುಲ್ ಗಾಂಧಿಯ ಸಂಸತ್ ಸದಸ್ಯ ಸ್ಥಾನದ ಮರುಸ್ಥಾಪನೆಯೂ ಆದಂತಾಗಿದೆ.
2019 ರಲ್ಲಿ ಕೋಲಾರದಲ್ಲಿ ನಡೆದ ರ‍್ಯಾಲಿಯಲ್ಲಿ ರಾಗಾ ‘ಎಲ್ಲ ಕಳ್ಳರ ಸರ್‌ನೇಮ್ ಮೋದಿ ಎಂದೇ ಯಾಕಿದೆ’ ಎಂದು ಹೇಳಿದ್ದರು. ಇದು ಮೋದಿ ಸರ್‌ನೇಮ್‌ಗೆ ಮಾಡಿದ ಅವಮಾನ ಎಂದು ಮಾಜಿ ಸಚಿವ ಪೂರ್ಣೇಶ್ ಮೋದಿ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಈ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯವು ನೀಡಿದ್ದ ಎರಡು ವರ್ಷಗಳ ಜೈಲು ಶಿಕ್ಷೆಗೆ ತಡೆ ನೀಡುವುದಕ್ಕೆ ಗುಜರಾತ್ ಹೈಕೋರ್ಟ್ ಸಹ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ರಾಹುಲ್ ಗಾಂಧಿಯವರಿಗೆ ಈಗ ತಾತ್ಕಾಲಿಕವಾಗಿ ನಿರಾಳತೆ ಸಿಕ್ಕಿದೆ.
“ಎರಡು ವರ್ಷಗಳ ಅವಧಿಯ ಸಜೆ ನೀಡುವುದಕ್ಕೆ ವಿಚಾರಣಾ ನ್ಯಾಯಾಲಯವು ಕಾರಣಗಳನ್ನೇನೂ ಕೊಟ್ಟಿಲ್ಲ. ಅಲ್ಲದೇ, ಈ ಶಿಕ್ಷೆಯ ಕಾರಣದಿಂದ ಸಂಸದ ಅಮಾನತ್ತಿನಲ್ಲಿರುವುದು ಆ ಕ್ಷೇತ್ರದ ಮತದಾರರ ಹಕ್ಕನ್ನೂ ಕಸಿದಂತಾಗುತ್ತದೆ” ಎಂದು ಮಧ್ಯಾಂತರ ಆದೇಶ ನೀಡುವ ವೇಳೆ ನ್ಯಾಯಮೂರ್ತಿ ಬಿಆರ್ ಗವಾಯಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.
ರಾಹುಲ್ ಗಾಂಧಿ ಪರ ವಾದಿಸಿದ ವಕೀಲ ಅಭಿಷೇಕ್ ಮನು ಸಿಂಘ್ವಿ- “ಮೋದಿ ಉಪನಾಮ ಹೋದಿರುವ 13 ಕೋಟಿ ಜನರ ಪೈಕಿ ಯಾರಿಗೂ ಈ ಹೇಳಿಕೆಯಿಂದ ಅವಮಾನವಾದಂತೆ ಅನಿಸಿಲ್ಲ. ಒಬ್ಬ ಬಿಜೆಪಿ ಸದಸ್ಯನಿಂದ ಮಾತ್ರ ಮಾನನಷ್ಟದ ಆರೋಪ ಬಂತು” ಎಂದು ಆಕ್ಷೇಪಿಸಿದರು.
ಮಧ್ಯಂತರ ತಡೆ ನೀಡುವ ಸಂದರ್ಭದಲ್ಲಿ ಎಚ್ಚರಿಕೆಯ ಮಾತುಗಳನ್ನೂ ಆಡಿರುವ ಪೀಠವು, “ಹೇಳಿಕೆಗಳನ್ನು ನೀಡುವಾಗ ಎಚ್ಚರವಿರಲಿ, ಮೋದಿ ಸರ್‌ನೇಮ್ ಬಗ್ಗೆ ನಿಮ್ಮ ಹೇಳಿಕೆ ಉತ್ತಮ ಉದ್ದೇಶದಿಂದ ಕೂಡಿರಲಿಲ್ಲ, ಇನ್ನು ಮುಂದೆ ಜಾಗ್ರತೆ ವಹಿಸಿ. ಯಾವುದೇ ಸಾರ್ವಜನಿಕ ಭಾಷಣಗಳನ್ನು ಮಾಡುವಾಗ ಎಚ್ಚರಿಕೆ ವಹಿಸಬೇಕು” ಎಂದು ಹೇಳಿದೆ.