ಸವದತ್ತಿ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿಗೆ ಬಿಗ್ ​ ರಿಲಿಫ್: ಆಯೋಗದಿಂದ ನಾಮಪತ್ರ ಅಂಗೀಕಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸವದತ್ತಿ ಯಲ್ಲಮ್ಮ ವಿಧಾನಸಭಾ ಕ್ಷೇತ್ರದ (Savdatti Yellamma Constituency) ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ (Ratna Mamani) ನಾಮಪತ್ರ ಗೊಂದಲ ಕೊನೆಗೂ ತೆರೆಕಂಡಿದ್ದು, ರತ್ನಾ ಮಾಮನಿ ಅವರಿಗೆ ಬಿಗ್​ ರಿಲಿಫ್ ಸಿಕ್ಕಿದೆ.

​​ರತ್ನಾಅವರು ಸಲ್ಲಿಸಿದ ಅಫಿಡವಿಟ್​ಗೆ ಕಾಂಗ್ರೆಸ್​, ಆಮ್​ ಆದ್ಮಿ ಪಕ್ಷದ ಅಭ್ಯರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಇಂದು (ಏ.22) ಚುನಾವಣಾಧಿಕಾರಿಗಳು ವಿಚಾರಣೆ ನಡೆಸಿದ್ದು, ಪರ, ವಿರುದ್ಧದ ವಕೀಲರ ವಾದ ಆಲಿಸಿ ನಾಮಪತ್ರ ಕ್ರಮಬದ್ಧವಾಗಿದೆ ಎಂದು ಸ್ವೀಕರಿಸಿದ್ದಾರೆ.

ರತ್ನಾ ಮಾಮನಿ ಅವರು ಅಫಿಡೆವಿಟ್ ಸಲ್ಲಿಕೆ ವೇಳೆ ಪ್ರಜಾಪ್ರತಿನಿಧಿ ಕಾಯ್ದೆ ಉಲ್ಲಂಘಸಿದ್ದಾರೆಂದು ಸವದತ್ತಿ ಕಾಂಗ್ರೆಸ್ ಅಭ್ಯರ್ಥಿ ವಿಶ್ವಾಸ ವೈದ್ಯ, ಆಮ್​ ಆದ್ಮಿ ಪಕ್ಷದ ಅಭ್ಯರ್ಥಿ ಬಾಪುಗೌಡ ಪಾಟೀಲ್ ನಿನ್ನೆ (ಏ.21) ನಾಮಪತ್ರ ಪರಿಶೀಲನೆ ವೇಳೆ ಆಕ್ಷೇಪಣೆ ವ್ಯಕ್ತಪಡಿಸಿದ್ದರು.

ರತ್ನಾ ಮಾಮನಿ ಅವರು ಏ.18 ಹಾಗೂ ಏ.19ರಂದು ಎರಡು ಬಾರಿ ನಾಮಪತ್ರ ಸಲ್ಲಿಸಿದ್ದರು. ಎರಡೂ ಬಾರಿಯೂ ಪ್ರಜಾಪ್ರತಿನಿಧಿ ಕಾಯ್ದೆ 2019ರ ತಿದ್ದುಪಡಿ ಪ್ರಕಾರ ಪರಿಷ್ಕೃತ ಫಾರ್ಮ್ ಸಂಖ್ಯೆ 26 (ಅಫಿಡೆವಿಟ್) ಸಲ್ಲಿಸದೆ, 2018ರ ಮಾದರಿಯ ಫಾರ್ಮ್ ಸಂಖ್ಯೆ 26 (ಅಫಿಡೆವಿಟ್) ಸಲ್ಲಿಸಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಸವದತ್ತಿ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ಅವರ ನಾಮಪತ್ರವನ್ನು ತಿರಸ್ಕರಿಸುವಂತೆ ವಿಪಕ್ಷಗಳು ಆಗ್ರಹಿಸಿದ್ದವು.

ಈ ಹಿನ್ನೆಲೆ ಇಂದು (ಏ.22)ಆಕ್ಷೇಪಣೆಗಳ ವಿಚಾರಣೆಗೆ ಲಿಖಿತ ಹೇಳಿಕೆಯೊಂದಿಗೆ ಹಾಜರಾಗುವಂತೆ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ಅವರಿಗೆ ಸವದತ್ತಿ ಯಲ್ಲಮ್ಮ ಮತಕ್ಷೇತ್ರದ ಚುನಾವಣಾಧಿಕಾರಿ ಡಾ.ರಾಜೀವ್ ಕೂಲೇರ್ ನೋಟಿಸ್ ನೀಡಿದ್ದರು. ರತ್ನಾ ಮಾಮನಿ ಅವರು ವಿಚಾರಣೆಗೆ ಹಾಜಾರಾಗಿದ್ದು, ಚುನಾವಾಣಾ ಅಧಿಕಾರಿಗಳು ನಾಮಪತ್ರ ಕ್ರಮಬದ್ಧವಾಗಿದೆ ಎಂದು ಸ್ವೀಕರಿಸಿದ್ದಾರೆ.

ಸವದತ್ತಿ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ನಾಮಪತ್ರ ಅಂಗೀಕಾರವಾದ ಹಿನ್ನೆಲೆ ಹೈಕೋರ್ಟ್ ಮೆಟ್ಟಿಲೇರಲು ಕಾಂಗ್ರೆಸ್​ ಅಭ್ಯರ್ಥಿ ವಿಶ್ವಾಸ ವೈದ್ಯ ಪರ ವಕೀಲ ಮುರುಘೇಂದ್ರ ವಂಟಮೂರಿ ಸಜ್ಜಾಗಿದ್ದಾರೆ. ನಾವು ಹೈಕೋರ್ಟ್‌ನಲ್ಲಿ ಫೈಟ್ ಮಾಡುತ್ತೇವೆ. ಯಾವ ಕಾರಣಕ್ಕೆ ಅಂಗೀಕಾರ ಆಗಿದೆ ಮಾಡಿದ್ದಾರೆ ಎಂದು ನಮಗೆ ತಿಳಿಸಿಲ್ಲ. ಕೇವಲ ಅಂಗೀಕಾರ ಆಗಿದೆ ಅಂತ ಮಾತ್ರ ಹೇಳಿದ್ದಾರೆ. ನಾವು ಚುನಾವಣಾಧಿಕಾರಿಗಳ ಬಳಿ ತೀರ್ಪಿನ ಪ್ರತಿ ಪಡೆದು ಮುಂದಿನ ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!