ಬಿಹಾರ ಸಚಿವ ಸಂಪುಟ ವಿಸ್ತರಣೆ: ಆರ್‌ಜೆಡಿಗೆ ಸಿಂಹಪಾಲು, ತೇಜ್‌ ಪ್ರತಾಪ್‌ಗೆ ಸಂಪುಟದಲ್ಲಿ ಸ್ಥಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಇಂದು ತಮ್ಮ ಸಚಿವ ಸಂಪುಟವನ್ನು ವಿಸ್ತರಿಸಿದ್ದಾರೆ. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದ ನಂತರ ನಿತೀಶ್ ಕುಮಾರ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ, ನಂತರ ಆರ್‌ಜೆಡಿ ಮತ್ತು ಇತರ ಪಕ್ಷಗಳೊಂದಿಗೆ ಸೇರಿ ಮಹಾಘಟಬಂಧನ್ ಸರ್ಕಾರವನ್ನು ರಚಿಸಲಾಯಿತು. ಈ ಕ್ರಮದಲ್ಲಿ ನಿತೀಶ್ ಕುಮಾರ್ ಬಿಹಾರ ಸಿಎಂ ಆಗಿ ಹಾಗೂ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಉಪ ಮುಖ್ಯಮಂತ್ರಿಯಾಗಿ ಆಗಸ್ಟ್ 10ರಂದು ಪ್ರಮಾಣ ವಚನ ಸ್ವೀಕರಿಸಿದರು. ಅದಾದ ಬಳಿಕ ಇಂದು ಸಚಿವ ಸಂಪುಟ ವಿಸ್ತರಣೆ ಮಾಡಿದ್ದಾರೆ.

ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಇಂದು ಬೆಳಗ್ಗೆ 11.30ಕ್ಕೆ 31 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ನೂತನ ಸಚಿವರಿಗೆ ರಾಜ್ಯಪಾಲರು ಪ್ರಮಾಣ ವಚನ ಬೋಧಿಸಿದರು. ಮೈತ್ರಿಕೂಟದಲ್ಲಿ ದೊಡ್ಡ ಪಕ್ಷವಾಗಿರುವ ಆರ್‌ಜೆಡಿಗೆ ಸಿಂಹಪಾಲು ದಕ್ಕಿದೆ. ಆರ್‌ಜೆಡಿಯಿಂದ 16 ಮಂದಿಗೆ ಸಚಿವ ಸ್ಥಾನ, ಜೆಡಿಯುನಿಂದ 11 ಮಂದಿಗೆ ಸಚಿವ ಸ್ಥಾನ, ಇಬ್ಬರು ಕಾಂಗ್ರೆಸ್ ಶಾಸಕರು, ಹಿಂದೂಸ್ತಾನಿ ಅವಾಮ್ ಮೋರ್ಚಾದ ಒಬ್ಬರು ಮತ್ತು ಏಕೈಕ ಸ್ವತಂತ್ರ ಶಾಸಕ ಸುಮಿತ್ ಕುಮಾರ್ ಸಿಂಗ್ ಸಹ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಅಶೋಕ್ ಚೌಧರಿ, ಲೇಶಿ ಸಿಂಗ್, ವಿಜಯ್ ಕುಮಾರ್ ಚೌಧರಿ, ಸಂಜಯ್ ಝಾ, ಶೀಲಾ ಕುಮಾರಿ, ಸುನೀಲ್ ಕುಮಾರ್ ಮದನ್ ಸಾಹ್ನಿ ಮತ್ತು ಬಿಜೇಂದ್ರ ಯಾದವ್ ಸೇರಿದಂತೆ ಅನೇಕ ಮಾಜಿ ಸಚಿವರನ್ನು ನಿತೀಶ್ ಕುಮಾರ್ ತಮ್ಮ ಪಕ್ಷದಲ್ಲಿ ಉಳಿಸಿಕೊಂಡರು. ಆರ್‌ಜೆಡಿಯಿಂದ ತೇಜ್ ಪ್ರತಾಪ್ ಯಾದವ್, ಅಲೋಕ್ ಮೆಹ್ತಾ, ಸುರೇಂದ್ರ ಪ್ರಸಾದ್ ಯಾದವ್ ಮತ್ತು ರಮಾನಂದ್ ಯಾದವ್, ಕುಮಾರ್ ಸರ್ವಜೀತ್, ಸಮೀರ್ ಕುಮಾರ್ ಮಹಾಸೇತ್, ಚಂದ್ರಶೇಖರ್, ಲಲಿತ್ ಯಾದವ್ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಕಾಂಗ್ರೆಸ್‌ನಿಂದ ಅಫಾಕ್ ಆಲಂ ಮತ್ತು ಮುರಾರಿ ಲಾಲ್ ಗೌತಮ್ ಸಂಪುಟಕ್ಕೆ ಸೇರ್ಪಡೆಗೊಂಡರೆ, ಹಿಂದೂಸ್ತಾನಿ ಅವಾಮ್ ಮೋರ್ಚಾದಿಂದ ಸಂತೋಷ್ ಸುಮನ್ ಕೂಡ ಪ್ರಮಾಣ ವಚನ ಸ್ವೀಕರಿಸಿದರು.

ಬಿಹಾರ ಸಂಪುಟದಲ್ಲಿ ಮುಖ್ಯಮಂತ್ರಿ ಸೇರಿದಂತೆ 36 ಸಚಿವರಿರಬಹುದು. ಮುಂದಿನ ಸಚಿವ ಸಂಪುಟ ವಿಸ್ತರಣೆಗಾಗಿ ಕೆಲವು ಸಚಿವ ಸ್ಥಾನಗಳನ್ನು ಖಾಲಿ ಇಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಹೊಸ ಸರ್ಕಾರವು ಆಗಸ್ಟ್ 24 ರಂದು ಬಿಹಾರ ವಿಧಾನಸಭೆಯಲ್ಲಿ ತನ್ನ ಬಹುಮತವನ್ನು ಸಾಬೀತುಪಡಿಸಬೇಕಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!