ಹೊಸದಿಗಂತ ವರದಿ, ಅಂಕೋಲಾ:
ತಾಲೂಕಿನ ಜಮಗೋಡ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಗ್ಯಾಸ್ ಟ್ಯಾಂಕರ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಗಂಭೀರವಾಗಿ ಗಾಯಗೊಂಡ ಬೈಕ್ ಸವಾರ ಕಾರವಾರ ಜಿಲ್ಲಾ ಆಸ್ಪತ್ರೆಯಲ್ಲಿ ಮೃತ ಪಟ್ಟ ಘಟನೆ ನಡೆದಿದೆ.
ಹಾವೇರಿ ಜಿಲ್ಲೆಯ ಹಾನಗಲ್ ನಿವಾಸಿ ಪ್ರವೀಣ ನಾಗೇಂದ್ರಪ್ಪ ಲಮಾಣಿ (23) ಮೃತ ಯುವಕನಾಗಿದ್ದು ಕಾರವಾರದಲ್ಲಿ ಟೈಲ್ಸ್ ಜೋಡಣೆ ಕೆಲಸ ಮಾಡಿಕೊಂಡಿದ್ದ ಈತ ಊರಿಗೆ ಹೋಗಿ ಕಾರವಾರಕ್ಕೆ ಮರಳುತ್ತಿದ್ದ ಸಂದರ್ಭದಲ್ಲಿ ಗ್ಯಾಸ್ ಟ್ಯಾಂಕರಿಗೆ
ಬೈಕ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದು ಗಂಭೀರವಾಗಿ ಗಾಯಗೊಂಡವನನ್ನು ರಾಷ್ಟ್ರೀಯ ಹೆದ್ದಾರಿ ಆಂಬ್ಯುಲೆನ್ಸ್ ಮೂಲಕ ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ಕಾರವಾರದ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿತ್ತು.
ಅಂಗಾಗಳಿಗೆ ಗಂಭೀರ ಗಾಯಗಳಾಗಿ ತೀವ್ರ ರಕ್ತಸ್ರಾವ ಆಗಿದ್ದರಿಂದ ಚಿಕಿತ್ಸೆಗೆ ಸ್ಪಂದಿಸದೆ ಗಾಯಾಳು ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.