Sunday, July 3, 2022

Latest Posts

ಅಪ್ರಾಪ್ತೆಗೆ ದ್ವಿಚಕ್ರ ವಾಹನ ನೀಡಿದ ತಪ್ಪಿಗೆ ಶಿಕ್ಷೆಗೆ ಗುರಿಯಾದ ತಂದೆ!

ಹೊಸ ದಿಗಂತ ವರದಿ, ಮಡಿಕೇರಿ:

ಕುಶಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿರುವ ಕುಶಾಲನಗರದ ಸಿಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರು, ಅಪ್ರಾಪ್ತ ವಯಸ್ಸಿನ ಮಗಳಿಗೆ ದ್ವಿಚಕ್ರ ವಾಹನ ನೀಡಿದ್ದಕ್ಕಾಗಿ ಆಕೆಯ ತಂದೆಗೆ 25 ಸಾವಿರ ದಂಡ ಹಾಗೂ ಒಂದು ದಿನದ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ.
ಕುಶಾಲನಗರ ನಂಜರಾಯಪಟ್ಟಣ ನಿವಾಸಿ ಎ.ಜೆ.ಆ್ಯಂಟೋಣಿ ಎಂಬವರೇ ದಂಡ ಹಾಗೂ ಶಿಕ್ಷೆಗೆ ಗುರಿಯಾದವರಾಗಿದ್ದಾರೆ.
ಆ್ಯಂಟೋಣಿ ಅವರು ಜನವರಿ 6 ರಂದು ತಮ್ಮ ಅಪ್ರಾಪ್ತ ವಯಸ್ಸಿನ ಮಗಳಿಗೆ ದ್ವಿಚಕ್ರ ವಾಹನ(ಕೆ.ಎ.12-ಆರ್.6132) ಚಲಾಯಿಸಲು ನೀಡಿದ್ದರು. ಅಪ್ರಾಪ್ತೆ ಚಲಾಯಿಸುತ್ತಿದ್ದ ಸ್ಕೂಟಿ ವಾಹನ ದುಬಾರೆ ಪೆಟ್ರೋಲ್ ಬಂಕ್ ಬಳಿ ತ್ಯಾಗತ್ತೂರು ನಿವಾಸಿ ಸಮೀರ್ ಎಂಬವರು ಚಲಾಯಿಸುತ್ತಿದ್ದ ಬುಲ್ಲೆಟ್ ಬೈಕ್‍ಗೆ(ಕೆ.ಎ.12-ಎಸ್.5190) ಡಿಕ್ಕಿಯಾಗಿತ್ತು.
ಈ ಘಟನೆ ಕುರಿತು ಸಮೀರ್ ದೂರು ನೀಡಿದ ಹಿನ್ನೆಲೆಯಲ್ಲಿ ಕುಶಾಲನಗರ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಪಘಾತ ಪ್ರಕರಣವನ್ನು ತನಿಖೆ ನಡೆಸಿದ ಸಂದರ್ಭ ಸ್ಕೂಟಿ ಚಲಾಯಿಸುತ್ತಿದ್ದ ಬಾಲಕಿ 16 ವರ್ಷದವಳೆಂದು ತಿಳಿದು ಬಂದಿತ್ತು.
ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಿಂದ ಸಿವಿಲ್ ಜಡ್ಜ್ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಅಪ್ರಾಪ್ತೆ ಬಾಲಕಿ ಹಾಗೂ ಆಕೆಯ ತಂದೆ(ವಾಹನದ ಮಾಲೀಕರು) ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಸಿಜೆ ಮತ್ತು ಜೆಎಂಎಫ್‍ಸಿ ನ್ಯಾಯಾಲಯದ ನ್ಯಾಯಾಧೀಶರು, ಅಪಘಾತಕ್ಕೆ ಕಾರಣವಾದ ಅಪ್ರಾಪ್ತೆಗೆ ವಾಹನವನ್ನು ಚಲಾಯಿಸಲು ನೀಡಿದ ವ್ಯಕ್ತಿಗೆ 25 ಸಾವಿರ ರೂ. ದಂಡ ವಿಧಿಸಿದ್ದಲ್ಲದೆ, ಒಂದು ದಿನದ ಸಜೆಯನ್ನೂ ವಿಧಿಸಿ ತೀರ್ಪು ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss