spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, January 28, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಗಡಿ ಜಿಲ್ಲೆ ಕೊಡಗಿನಲ್ಲಿ ಪರಭಾಷೆ ಪ್ರಭಾವ : ನಾಡೋಜ ಮಹೇಶ್ ಜೋಷಿ ವಿಷಾದ

- Advertisement -Nitte

ಹೊಸ ದಿಗಂತ ವರದಿ ಮಡಿಕೇರಿ:

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಎಂ.ಪಿ.ಕೇಶವ ಕಾಮತ್ ಅವರು, ಕಸಾಪ ರಾಜ್ಯಾಧ್ಯಕ್ಷ ನಾಡೋಜ ಮಹೇಶ್ ಜೋಷಿ ಸಮ್ಮುಖದಲ್ಲಿ ಮಂಗಳವಾರ ಅಧಿಕಾರ ಸ್ವೀಕರಿಸಿದರು.
ನಗರದ ಫೀ.ಮಾ.ಕೆ.ಎಂ.ಕಾರ್ಯಪ್ಪ ವೃತ್ತದ ಬಳಿಯ ಎಸ್‍ಜೆಎಸ್‍ಆರ್‍ವೈ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ, ಕಸಾಪ ಹಂಗಾಮಿ ಅಧ್ಯಕ್ಷರಾಗಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ದರ್ಶನ್ ಅವರಿಂದ ಧ್ವಜವನ್ನು ಸ್ವೀಕರಿಸುವ ಮೂಲಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಕಾರ್ಯಾಭಾರವನ್ನು ವಹಿಸಿಕೊಂಡರು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಮಹೇಶ್ ಜೋಷಿ, ಗಡಿ ಜಿಲ್ಲೆ ಕೊಡಗಿನಲ್ಲಿ ಹೊರ ರಾಜ್ಯದ ಭಾಷೆಗಳ ಪ್ರಭಾವ ಇರುವುದರಿಂದ ಇಲ್ಲಿ ಕನ್ನಡದ ಕೆಲಸಗಳನ್ನು ಪರಿಣಾಮಕಾರಿಯಾಗಿ ಮಾಡುವ ಜವಾಬ್ದಾರಿ ನೂತನ ಅಧ್ಯಕ್ಷ ಕೇಶವ ಕಾಮತ್ ಅವರ ಮೇಲಿದೆ. ಚುನಾವಣೆಯವರೆಗಷ್ಟೇ ಸ್ಪರ್ಧಿಗಳು, ನಂತರ ಎಲ್ಲರೂ ಕನ್ನಡದ ಸೇವಕರೇ ಆಗಿರುವುದರಿಂದ ಎಲ್ಲರನ್ನೂ ಒಟ್ಟಾಗಿ ಕನ್ನಡದ ಚಟುವಟಿಕೆಗಳಲ್ಲಿ ಭಾಗಿಗಳನ್ನಾಗಿ ಮಾಡಿಕೊಂಡು ಮುನ್ನಡೆಯಬೇಕೆಂದು ಸಲಹೆ ನೀಡಿದರು.
ಜಿಲ್ಲೆಯಲ್ಲಿನ ಕನ್ನಡದ ಕಾರ್ಯಕ್ರಮಗಳಿಗೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಸಂಪೂರ್ಣ ಬೆಂಬಲ ಮತ್ತು ಸಹಕಾರವನ್ನು ನೀಡಲಿದ್ದು, ಕೇಂದ್ರ, ಜಿಲ್ಲಾ ಕಸಾಪಗಳು ಒಟ್ಟಾಗಿ ತಾಯಿ ಭುವನೇಶ್ವರಿಯ ತೇರನ್ನು ಎಳೆಯೋಣವೆಂದು ವಿಶ್ವಾಸದಿಂದ ನುಡಿದರು.
ಜಿಲ್ಲಾ ಕಸಾಪ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಎಂ.ಪಿ.ಕೇಶವ ಕಾಮತ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್‍ನ್ನು ಜನಸಾಮಾನ್ಯರ ಪರಿಷತ್‍ನ್ನಾಗಿ ಪರಿವರ್ತಿಸುವ ನೂತನ ವಿಚಾರ ಧಾರೆ ತಮ್ಮದಾಗಿದೆ. ಕನ್ನಡ ಅನ್ನದ ಭಾಷೆಯಾಗಿ ಬೆಳೆಯಬೇಕಾಗಿದೆ. ಇದಕ್ಕಾಗಿ ಕನ್ನಡದಲ್ಲೇ ಹೆಚ್ಚು ಹೆಚ್ಚಾಗಿ ವ್ಯವಹರಿಸುವುದರೊಂದಿಗೆ, ಕನ್ನಡ ಪರ ಕಾರ್ಯಕ್ರಮಗಳನ್ನು ಹೆಚ್ಚಾಗಿ ರೂಪಿಸುವುದು ಅತ್ಯವಶ್ಯವೆಂದು ದೃಢವಾಗಿ ನುಡಿದರು.
ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಗಡಿ ಜಿಲ್ಲೆ ಕೊಡಗಿನಲ್ಲಿ ಅನ್ಯಭಾಷಿಕರು ಹೆಚ್ಚಾಗಿದ್ದರೂ ಭಾಷಾ ಬಾಂಧವ್ಯ ಗಟ್ಟಿಯಾಗಿ ಉಳಿದಿದೆ. ವಿವಿಧ ಅಕಾಡೆಮಿಗಳ ಸಹಕಾರದೊಂದಿಗೆ ಹತ್ತು ಹಲವು ಕನ್ನಡ ಪರ ಕಾರ್ಯಗಳನ್ನು ನಡೆಸಿಕೊಂಡು ಬರಲಾಗಿದೆಯೆಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ದರ್ಶನಾ ಮಾತನಾಡಿ, ಕನ್ನಡ ಪರ ಕಾರ್ಯಕ್ರಮಗಳಿಗೆ ಇಲಾಖೆಯಿಂದ ಅಗತ್ಯ ಸಹಕಾರ ಬೆಂಬಲವನ್ನು ನೀಡುವುದಾಗಿ ತಿಳಿಸಿದರು. ಕಸಾಪ ನಿಕಟ ಪೂರ್ವ ಅಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿದರು.
ಸನ್ಮಾನ: ಇದೇ ಸಂದರ್ಭ ರಾಜ್ಯ ಕಸಾಪ ಅಧ್ಯಕ್ಷ ನಾಡೋಜ ಮಹೇಶ್ ಜೋಷಿ ಅವರನ್ನು ಹಾಗೂ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ಕೊಡಗು ಜಿಲ್ಲಾ ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಮನು ಶೆಣೈ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ರೇವತಿ ರಮೇಶ್ ಮತ್ತು ಭಾರತಿ ರಮೇಶ್ ನಾಡಗೀತೆ ಹಾಡಿದರು. ಮಡಿಕೇರಿ ತಾಲೂಕು ಕಸಾಪ ಮಾಜಿ ಅಧ್ಯಕ್ಷ ಕೆ.ಟಿ.ಬೇಬಿ ಮ್ಯಾಥ್ಯು ಸ್ವಾಗತಿಸಿದರೆ, ಎಸ್.ಐ. ಮುನೀರ್ ಅಹಮ್ಮದ್ ಕಾರ್ಯಕ್ರಮ ನಿರೂಪಿಸಿದರು. ಕಸಾಪ ಸದಸ್ಯ ವಿಲ್‍ಫ್ರೆಡ್ ಕ್ರಾಸ್ತಾ ವಂದಿಸಿದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img

Don't Miss