ಬಿಲ್ಲವರು ಆರ್ಥಿಕವಾಗಿ ಸದೃಢರಾಗಬೇಕು: ಅಪ್ಪಚ್ಚುರಂಜನ್

ಹೊಸದಿಗಂತ ವರದಿ, ಸುಂಟಿಕೊಪ್ಪ:
ಬಿಲ್ಲವ ಸಮಾಜದವರು ಸರಕಾರದ ಸವಲತ್ತುಗಳನ್ನು ಪಡೆದುಕೊಳ್ಳುವುದರೊಂದಿಗೆ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಆರ್ಥಿಕ ಸದೃಢತೆ ಕಂಡುಕೊಳ್ಳಬೇಕು ಎಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಸಲಹೆ ಮಾಡಿದರು.
ಸುಂಟಿಕೊಪ್ಪದ ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘದಿಂದ ದೇಯಿಬೈದೇದಿ ಬಿಲ್ಲವ ಮಹಿಳಾ ಸಂಘ, ಬಿಲ್ಲವ ವಿದ್ಯಾರ್ಥಿ ಘಟಕದ ಸಹಯೋಗದೊಂದಿಗೆ ಆಯೋಜಿಸಿದ್ದ ಶ್ರೀ ನಾರಾಯಣ ಗುರು ಜಯಂತ್ಯುತ್ಸವ, ಗೌರವ ಸಮರ್ಪಣೆ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶೋಷಣೆಗೆ ಒಳಗಾದ ಸಮಾಜದವರನ್ನು ಮುಖ್ಯವಾಹಿನಿಗೆ ತಂದ ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶ, ಚಿಂತನೆಗಳಿಂದ ಸಮಾಜ ಕಟ್ಟುವ ಕೆಲಸವನ್ನು ಮಾಡಬೇಕು. ಸರಕಾರದ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದ ಅವರು ಬಿಲ್ಲವ ಸಮಾಜದ ಕಟ್ಟಡ ನಿರ್ಮಾಣಕ್ಕೆ ಸರಕಾರದಿಂದ ಅನುದಾನ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.
ಸರಕಾರ ಕಡೆಗಣಿಸುತ್ತಿದೆ:
ದಿಕ್ಸೂಚಿ ಭಾಷಣ ಮಾಡಿದ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಾಲಯದ ಖಜಾಂಚಿ ಪದ್ಮನಾಭ ಅವರು, ಹಿಂದುಳಿದ ವರ್ಗಕ್ಕೆ ಸೇರಿದ ಬಿಲ್ಲವರನ್ನು ಸರಕಾರ ಕಡೆಗಣಿಸುತ್ತಿದೆ. ಬಲಿಷ್ಠ ಜಾತಿಯವರಿಗೆ ನಿಗಮ ಸ್ಥಾಪಿಸುವ ಸರಕಾರ ಬಿಲ್ಲವರಿಗೆ ನಿಗಮ ಸ್ಥಾಪಿಸಲು ಎಷ್ಟೇ ಒತ್ತಾಯ ಹಾಕಿದರೂ ಸಮ್ಮತಿ ನೀಡುತ್ತಿಲ್ಲ. ರಾಜಕೀಯ ಶಕ್ತಿ ಸಮಾಜದ ಬೆಳವಣಿಗೆಗೆ ಅತ್ಯಗತ್ಯವಾಗಿದೆ. ನಿಗಮ ಸ್ಥಾಪನೆಗಾಗಿ ತೀವ್ರವಾದ ಹೋರಾಟ ನಡೆಸಲಾಗುವುದು. ಶಿಕ್ಷಣದ ಕೊರತೆಯಿಂದ ಬಿಲ್ಲವ ಜನಾಂಗದವರು ಉನ್ನತ ಹುದ್ದೆ ಪಡೆಯಲು ವಿಫಲವಾಗುತ್ತಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ತುಳು ಚಿತ್ರರಂಗದ ಹಾಸ್ಯ ನಟ ಭೋಜರಾಜ ವಾಮಂಜೂರು ಅವರು ಮಾತನಾಡಿ, ಪೋಷಕರು ಮಕ್ಕಳ ವಿದ್ಯಾಭ್ಯಾಸಕ್ಕೆ ಆದ್ಯತೆ ಕೊಡಬೇಕು ಉತ್ತಮ ವಿದ್ಯಾಭ್ಯಾಸ ಪಡೆದವರು ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು. ಮಕ್ಕಳು ತಂದೆ ತಾಯಿಗಳಿಗೆ ಗೌರವ ಕೊಡಬೇಕು ಎಂದು ಹೇಳಿದರು.
ಗೌರವಾರ್ಪಣೆ:
50 ವರ್ಷ ದಾಂಪತ್ಯ ಜೀವನ ಪೂರೈಸಿರುವ ಬಿಲ್ಲವ ಸಮಾಜ 5 ಜೋಡಿಗಳಿಗೆ ಶಾಲು ಹೊದಿಸಿ ಮಾಲಾರ್ಪಣೆಗೈದು ಕಿರು ಕಾಣಿಕೆ ನೀಡಲಾಯಿತು. ಗ್ರಾ.ಪಂ. ಪಂಚಾಯಿತಿಗೆ ಚುನಾಯಿತರಾದ ಬಿಲ್ಲವ ಸಮಾಜದ 10 ಮಂದಿಯನ್ನು ಸನ್ಮಾನಿಸಲಾಯಿತು. ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿಯಲ್ಲಿ ಶೇಕಡಾ 75 ಕ್ಕಿಂತ ಅಧಿಕ ಅಂಕ ಪಡೆದ ಸ್ವಜಾತಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರೋತ್ಸಾಹ ಧನ ನೀಡಲಾಯಿತು.
ಅಧ್ಯಕ್ಷತೆಯನ್ನು ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಬಿ.ಎಂ. ಮುಖೇಶ್ ವಹಿಸಿದ್ದರು.
ಸೋಮವಾರಪೇಟೆ ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಬಿ.ಎ.ಭಾಸ್ಕರ್, ವೀರಾಜಪೇಟೆ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಬಿ.ಎಂ.ಗಣೇಶ, ಕುಶಾಲನಗರ ಕೋಟಿ ಚೆನ್ನಯ್ಯ ಬಿಲ್ಲವ ಸಂಘದ ಅಧ್ಯಕ್ಷ ಹೆಚ್.ಬಿ.ರಮೇಶ, ಸುಂಟಿಕೊಪ್ಪ ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ಗೌರವ ಅಧ್ಯಕ್ಷ ಬಿ.ಕೆ.ಮೋಹನ್, ದೇಯಿಬೈದೇತಿ ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಮಧುನಾಗಪ್ಪ, ಬಿಲ್ಲವ ವಿದ್ಯಾರ್ಥಿ ಘಟಕದ ಪ್ರೀತಮ್, ಸುಂಟಿಕೊಪ್ಪ ಗ್ರಾ.ಪಂ. ಅಧ್ಯಕ್ಷೆ ಶಿವಮ್ಮ ಉಪಸ್ಥಿತರಿದ್ದರು.
ಸಮಾರಂಭಕ್ಕೂ ಮುನ್ನ ಪಟ್ಟಣದ ಮುಖ್ಯ ಬೀದಿಗಳಲ್ಲಿ ಚಂಡೆ ವಾದ್ಯಗೋಷ್ಠಿಯೊಂದಿಗೆ ಬ್ರಹ್ಮಶ್ರೀ ನಾರಾಯಣ ಗುರುಗಳು ಹಾಗೂ ಕೋಟಿ ಚೆನ್ನಯ್ಯರ ಭಾವಚಿತ್ರವನ್ನು ಮಂಟಪದಲ್ಲಿ ಕುಳ್ಳಿರಿಸಿ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!