ಬಿರ್ಭೂಮ್ ಹಿಂಸಾಚಾರ: ತನಿಖೆಯ ಸ್ಥಿತಿಗತಿ ವರದಿ ಸಲ್ಲಿಕೆಗೆ ಕಲ್ಕತ್ತಾ ಹೈಕೋರ್ಟ್ ಆದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್

ಕಲ್ಕತ್ತಾ: ತೃಣಮೂಲ ಕಾಂಗ್ರೆಸ್ ನಾಯಕನ ಹತ್ಯೆಗೆ ಪ್ರತೀಕಾರವಾಗಿ 8 ಜನರನ್ನು ಸಜೀವ ದಹನ ಮಾಡಿದ ಬಿರ್ಭೂಮ್ ಹಿಂಸಾಚಾರದ ತನಿಖೆಯ ಸ್ಥಿತಿಗತಿ ವರದಿಯನ್ನು ನಾಳೆ (ಮಾ. 24) ಮಧ್ಯಾಹ್ನ 2ಗಂಟೆಗೆ ಸಲ್ಲಿಸುವಂತೆ ಕಲ್ಕತ್ತಾ ಹೈಕೋರ್ಟ್ ಬುಧವಾರ ಪಶ್ಚಿಮ ಬಂಗಾಳ ಸರಕಾರಕ್ಕೆ ಸೂಚಿಸಿದೆ.

ಮುಖ್ಯ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಮತ್ತು ನ್ಯಾಯಮೂರ್ತಿ ರಾಜರ್ಷಿ ಭಾರದ್ವಾಜ್ ಅವರಿರುವ ಪೀಠವು ಸ್ಥಳದಲ್ಲಿ ಸಾಕ್ಷ್ಯಾಧಾರಗಳು ಯಥಾಸ್ಥಿತಿಯಲ್ಲಿ ಉಳಿಯುವಂತೆ ಮತ್ತು ಸಾಕ್ಷಿಗಳನ್ನು ರಕ್ಷಿಸಲು ಹಲವಾರು ನಿರ್ದೇಶನಗಳನ್ನು ನೀಡಿತು.

ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ಆದೇಶ
ಜಿಲ್ಲಾ ನ್ಯಾಯಾಧೀಶರ ಸಮ್ಮುಖದಲ್ಲಿ ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಮತ್ತು ಸ್ಥಳಕ್ಕೆ 24×7 ಸಿಸಿಟಿವಿ ಕಣ್ಗಾವಲಿಗೆ ಹೈಕೋರ್ಟ್ ನಿರ್ದೇಶಿಸಿದೆ. ದಿಲ್ಲಿಯ ಸಿಎಫ್ಎಸ್‌ಎಲ್ ತಂಡವು ಘಟನೆಯ ಸ್ಥಳಕ್ಕೆ ಭೇಟಿ ನೀಡಲು ಮತ್ತು ಯಾವುದೇ ವಿಳಂಬವಿಲ್ಲದೆ ವಿಧಿ ವಿಜ್ಞಾನ ಪರೀಕ್ಷೆಗೆ ಅಗತ್ಯ ವಸ್ತುಗಳನ್ನು ಸಂಗ್ರಹಿಸಲು ನ್ಯಾಯಾಲಯ ನಿರ್ದೇಶನ ನೀಡಿದೆ.

ಪುರ್ಬಾ ಬರ್ಧಮಾನ್ ಜಿಲ್ಲೆಯ ಜಿಲ್ಲಾ ನ್ಯಾಯಾಧೀಶರೊಂದಿಗೆ ಸಮಾಲೋಚಿಸಿ, ಡಿಜಿ ಮತ್ತು ಐಜಿಪಿ ಅವರು
ತಕ್ಷಣದ ಕ್ರಮಗಳೊಂದಿಗೆ ಪ್ರತ್ಯಕ್ಷದರ್ಶಿಗಳನ್ನು ಸಮರ್ಪಕ ರಕ್ಷಿಸಬೇಕು. ಪ್ರತ್ಯಕ್ಷ ಸಾಕ್ಷಿಗಳು ಯಾರಿಂದಲೂ ಬೆದರಿಕೆ ಅಥವಾ ಪ್ರಭಾವಕ್ಕೆ ಒಳಗಾಗುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ.

ತನಿಖೆ ಸಿಬಿಐಗೆ ವರ್ಗಾಯಿಸಲು ಒತ್ತಾಯ
ಕಲ್ಕತ್ತಾ ಹೈಕೋರ್ಟ್ ಬಿರ್ಭೂಮ್ ಜಿಲ್ಲೆಯ ರಾಮ್‌ಪುರ್‌ಹತ್ ಗ್ರಾಮದಲ್ಲಿ ನಡೆದ ಹಿಂಸಾಚಾರ ಘಟನೆಯ ಬಗ್ಗೆ ಸ್ವಯಂಪ್ರೇರಿತವಾಗಿ ಕೇಸ್ ದಾಖಲಿಸಿಕೊಂಡ ನಂತರ ಈ ಆದೇಶಗಳು ಬಂದಿವೆ. ಅಲ್ಲದೇ ಕೆಲವರು ಅರ್ಜಿಗಳನ್ನೂ ಸಲ್ಲಿಸಿದ್ದಾರೆ. ಸರಕಾರ ರಚಿಸಿರುವ ಎಸ್‌ಐಟಿ ನಿಷ್ಪಕ್ಷಪಾತವಾಗಿಲ್ಲ ಎಂದು ಆರೋಪಿಸಿದ ಅರ್ಜಿದಾರರು, ತನಿಖೆಯನ್ನು ಸಿಬಿಐಗೆ ವರ್ಗಾಯಿಸಬೇಕು ಎಂದು ಕೋರಿದ್ದಾರೆ.

ಪೆಟ್ರೋಲ್ ಬಾಂಬ್‌ಗಳಿಂದ ದಾಳಿ
ರಾಮ್‌ಪುರ್‌ಹತ್‌ನ ಬೊಗ್ಟುಯಿ ಗ್ರಾಮದಲ್ಲಿ ಜನಸಮೂಹವು ಆಕ್ರೋಶಗೊಂಡು ಪೆಟ್ರೋಲ್ ಬಾಂಬ್‌ಗಳಿಂದ ಮನೆಗಳಿಗೆ ಬೆಂಕಿ ಹಚ್ಚಿದ ನಂತರ ಮಂಗಳವಾರ ಇಬ್ಬರು ಮಕ್ಕಳು ಸೇರಿದಂತೆ ಎಂಟು ಜನರ ಸುಟ್ಟ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಿಂದಿನ ದಿನ ತೃಣಮೂಲ ಕಾಂಗ್ರೆಸ್ ಪಂಚಾಯತ್ ನಾಯಕ ಭಾದು ಶೇಖ್ ಹತ್ಯೆಗೆ ಪ್ರತೀಕಾರವಾಗಿ ಈ ಹತ್ಯೆಗಳು ನಡೆದಿವೆ ಎಂದು ಶಂಕಿಸಲಾಗಿದೆ.

ಘಟನೆಯ ಕುರಿತು ತನಿಖೆ ನಡೆಸಲು ಬಂಗಾಳ ಸರಕಾರವು ಹೆಚ್ಚುವರಿ ಮಹಾನಿರ್ದೇಶಕ (ಸಿಐಡಿ) ಜ್ಞಾನವಂತ್ ಸಿಂಗ್ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದೆ. ಕೇಂದ್ರ ಗೃಹ ಸಚಿವಾಲಯವು ಮಮತಾ ಬ್ಯಾನರ್ಜಿ ನೇತೃತ್ವದ ಸರಕಾರದಿಂದ ಘಟನೆಯ ವಿವರವಾದ ವರದಿಯನ್ನು ಕೇಳಿದೆ.

ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇದುವರೆಗೆ ಕನಿಷ್ಠ 22 ಜನರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಭಾದು ಶೇಖ್ ಅವರ ಮಕ್ಕಳೂ ಸೇರಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!