Thursday, July 7, 2022

Latest Posts

ಬಿಜೆಪಿ ಸ್ವಂತ ಶಕ್ತಿಯ ಮೇಲೆ ಚುನಾವಣೆ ಎದುರಿಸುತ್ತಿದೆ: ಸಿಎಂ ಬಸವರಾಜ ಬೊಮ್ಮಾಯಿ

ಹೊಸದಿಗಂತ ವರದಿ, ಚಿತ್ರದುರ್ಗ:

ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧೆ ಮಾಡದ ಕ್ಷೇತ್ರಗಳಲ್ಲಿ ಬೆಂಬಲ ಪಡೆಯಲಾಗುವುದು. ಆದರೆ ಜೆಡಿಎಸ್ ಜೊತೆ ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿದೆ ಕಾಂಗ್ರೆಸ್‌ನವರ ಆರೋಪದಲ್ಲಿ ಹುರುಳಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರ ನಿವಾಸದಲ್ಲಿ ಶುಕ್ರವಾರ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಪಕ್ಷವು ತನ್ನ ಸ್ವಂತ ಶಕ್ತಿಯ ಮೇಲೆ ವಿಧಾನ ಪರಿಷತ್ ಚುನಾವಣೆ ಎದುರಿಸುತ್ತಿದೆ. ನಮ್ಮ ಶಕ್ತಿಯನ್ನು ನಂಬಿ ನಾವು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇವೆ. ನಮ್ಮ ಶಕ್ತಿಯ ಜೊತೆ ಬೇರೆ ಯಾರಾದರೂ ನಮಗೆ ಬೆಂಬಲ ನೀಡಿದಲ್ಲಿ ಅದನ್ನು ಪಡೆಯುವುದರಲ್ಲಿ ತಪ್ಪೇನಿದೆ ಎಂದರು.
ದೇವೇಗೌಡರು ಸಹ ಒಂದು ಕಾಲದಲ್ಲಿ ರಾಷ್ಟ್ರೀಯ ಪಕ್ಷದಲ್ಲಿದ್ದವರು. ಈಗ ಪ್ರಾದೇಶಿಕ ಪಕ್ಷ ಕಟ್ಟಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ಪ್ರಾದೇಶಿಕ ಪಕ್ಷಗಳು ಆಯಾ ಪ್ರದೇಶಕ್ಕೆ ಸಂಬಂಧಿಸಿದ ವಿಚಾರಗಳನ್ನು ಇಟ್ಟುಕೊಂಡು ರಾಜಕೀಯ ಮಾಡುತ್ತವೆ. ಆದರೆ ರಾಷ್ಟ್ರೀಯ ಪಕ್ಷಗಳು ರಾಜ್ಯ ಮತ್ತು ರಾಷ್ಟ್ರದ ಹಿತವನ್ನು ಗಮನದಲ್ಲಿಟ್ಟುಕೊಂಡು ರಜಕೀಯ ಮಾಡುತ್ತವೆ. ಹಾಗಾಗಿ ರಾಷ್ಟ್ರೀಯ ಪಕ್ಷಗಳಿಂದ ರಾಜಕೀಯ ಹದಗೆಟ್ಟಿದ ಎಂಬ ಮಾತಿನಲ್ಲಿ ಸರಿಯಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಜನಸ್ವರಾಜ್ ಸಮಾವೇಶಕ್ಕೆ ಸಂಬಂಧಿಸಿದ ವಿರೋಧ ಪಕ್ಷಗಳ ಆರೋಪಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಈ ಕಾರ್ಯಕ್ರಮ ನೆರೆ ಬರುವ ಮೊದಲೇ ನಿಗದಿಯಗಿತ್ತು. ಹಾಗಾಗಿ ಅನಿವಾರ್ಯವಾಗಿ ಸಮಾವೇಶಗಳನ್ನು ಮಾಡಲಾಯಿತು. ಅಲ್ಲದೇ ನೆರೆ ಬಂದ ಎರಡು ದಿನಗಳಲ್ಲೇ ಪರಿಹಾರ ಕಾರ್ಯ ಕೈಗೆತ್ತಿಕೊಂಡಿದ್ದೇವೆ. ಸರ್ವೆ ಆದ ೨೪ ಗಂಟೆಗಳೊಳಗೆ ಸಂತ್ರಸ್ಥರಿಗೆ ಪರಿಹಾರ ನೀಡುವಂತೆ ಸೂಚಿಸಲಾಗಿದೆ. ನವೆಂಬರ್ ತಿಂಗಳಲ್ಲಿ ಬಂದ ನೆರೆಗೆ ಸಂಬಂಧಿಸಿದಂತೆ ದಾವಣಗೆರೆ ಜಿಲ್ಲೆಯಲ್ಲಿ ೯೭ ಲಕ್ಷ ರೂ. ಪರಿಹಾರ ನೀಡಲಾಗಿದೆ ಎಂದು ತಿಳಿಸಿದರು.
ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, ಶಾಸಕ ಗೂಳಿಹಟ್ಟಿ ಶೇಖರ್, ವಿಧಾನ ಪರಿಷತ್ ಸದಸ್ಯರಾದ ರವಿಕುಮಾರ್, ವೈ.ಎ.ನಾರಾಯಣಸ್ವಾಮಿ, ಚಿದಾನಂದಗೌಡ, ಖನಿಜ ಅಭಿವೃದ್ಧೀ ನಿಗಮದ ಅಧ್ಯಕ್ಷ ಎಸ್.ಲಿಂಗಮೂರ್ತಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss