ಹೊಸದಿಗಂತ ಆನ್ ಲೈನ್ ಡೆಸ್ಕ್:
ತ್ರಿಪುರದ ಬಳಿಕ ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲೂ ಬಿಜೆಪಿ ಸರ್ಕಾರ ರಚನೆಯಾಗಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.
ಅಸ್ಸಾಂ ವಿಧಾನಸಭಾ ಚುನಾವಣೆ ಹಿನ್ನೆಲೆ ಬಿಸ್ವಾನಾಥ್ನಲ್ಲಿಂದು ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ತ್ರಿಪುರದಲ್ಲಿ ಬಿಜೆಪಿ ಸರ್ಕಾರ ರಚಿಸಿಯಾಗಿದೆ. ನಿಮ್ಮ ಆಶೀರ್ವಾದದಿಂದ ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲೂ ನಮ್ಮ ಸರ್ಕಾರ ರಚಿಸಲು ಹೊರಟಿದ್ದೇವೆ.ಈ ರಾಜ್ಯಗಳ ಗಡಿಗಳು ಬಾಂಗ್ಲಾದೇಶದೊಂದಿಗೆ ಹಂಚಿಕೊಂಡಿವೆ. ಇಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಭಾರತದಲ್ಲಿ ಬಾಂಗ್ಲಾದೇಶಿಗರ ಪ್ರವೇಶವನ್ನು ನಿಲ್ಲಿಸಲು ನಾವು ಗಡಿ ನಿರ್ಬಂಧ ಹೇರುತ್ತೇವೆ ಎಂದು ಭರವಸೆ ನೀಡಿದರು.
‘ಬಿಜೆಪಿ ಆಡಳಿತದಲ್ಲಿ ಹಲವಾರು ಬಂಡುಕೋರರ ಗುಂಪುಗಳು ಶರಣಾಗತಿಯಾದವು. ಇದರಿಂದಾಗಿ ಅಸ್ಸಾಂನಲ್ಲಿ ಶಾಂತಿ ಮರಳಿದೆ. ಬಿಸ್ವನಾಥ್ಗೆ ನನ್ನನ್ನು ಆಹ್ವಾನಿಸಿದಾಗ ನನಗೆ 2014ರ ಆದಿವಾಸಿ ಹತ್ಯಾಕಾಂಡ ನೆನಪಿಗೆ ಬಂತು. ಆದರೆ ಈಗ ಇಲ್ಲಿ ಪರಿಸ್ಥಿತಿ ಸುಧಾರಣೆಯಾಗಿದೆ. ರಾಜ್ಯದಲ್ಲಿ ಶಾಂತಿಯಿದೆ ಎಂಬುದಕ್ಕಿಂತ ಉತ್ತಮವಾದ ಸುದ್ದಿ ಏನಿದೆ’ ಎಂದರು.
2018ರಲ್ಲಿ ತ್ರಿಪುರದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ 20 ವರ್ಷಗಳ ಕಾಲ ರಾಜ್ಯವನ್ನಾಳಿದ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ನೇತೃತ್ವದ ಸಿಪಿಐ ಸರ್ಕಾರವನ್ನು ಕೆಳಗಿಳಿಸಿ ಬಿಜೆಪಿ ಅಧಿಕಾರಕ್ಕೆ ಬಂದು ಇತಿಹಾಸ ಬರೆದಿತ್ತು. ಇದೀಗ ಮಾರ್ಚ್ 27ರಿಂದ ಏಪ್ರಿಲ್ 6ರವರೆಗೆ ಮೂರು ಹಂತಗಳಲ್ಲಿ ಅಸ್ಸಾಂ ವಿಧಾನಸಭಾ ಚುನಾವಣೆ ನಡೆಯಲಿದೆ. ಬಿಜೆಪಿ ಗೆಲ್ಲುವ ವಿಶ್ವಾಸ ಹೊಂದಿದೆ ಎಂದರು.