ಹೊಸ ದಿಗಂತ ವರದಿ ಮಡಿಕೇರಿ:
‘ಸೇವಾ ಹಿ ಸಂಘಟನೆ’ ಕಾರ್ಯಕ್ರಮ ರಾಜ್ಯಾದ್ಯಂತ ಅರ್ಥಪೂರ್ಣವಾಗಿ ನಡೆಯುತ್ತಿದ್ದು, ಸೇವೆಯಿಂದಲೇ ಸಂಘಟನೆ ಬಿಜೆಪಿಯ ಪ್ರಮುಖ ಗುರಿಯಾಗಿದೆ ಎಂದು ಭಾರತೀಯ ಜನತಾ ಪಾರ್ಟಿಯ ವೃತ್ತಿಪರ ಪ್ರಕೋಷ್ಠದ ರಾಜ್ಯ ಸಂಚಾಲಕ ಚೆನ್ನಮಲ್ಲಿಕಾರ್ಜುನ ಬಿ. ಪಾಟೀಲ್ ಹೇಳಿದ್ದಾರೆ.
ಕೊಡಗು ಜಿಲ್ಲಾ ಬಿಜೆಪಿ ವೃತ್ತಿಪರ ಪ್ರಕೋಷ್ಠದ ವತಿಯಿಂದ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಆಯೋಜಿಸಲಾಗಿರುವ ಉಚಿತ ಕೃತಕ ಕಾಲು ಜೋಡಣೆ ಮತ್ತು ಮಧುಮೇಹ ಸಲಹಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿ ಕೇವಲ ಒಂದು ರಾಜಕೀಯ ಪಕ್ಷವಲ್ಲ, ಸೇವಾ ಮನೋಭಾವದ ಸಂಘಟನೆಯೂ ಹೌದು. ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಪಕ್ಷ ಹಿಂದುಳಿದವರನ್ನು ಮುಖ್ಯ ವಾಹಿನಿಗೆ ತರುವ ಪ್ರಯತ್ನದಲ್ಲೂ ತೊಡಗಿದೆ. ಆರೋಗ್ಯ ಜಾಗೃತಿ ಮತ್ತು ಶಿಬಿರಗಳ ಮೂಲಕ ಆರೋಗ್ಯ ಸೇವೆಯನ್ನು ಕೈಗೊಳ್ಳಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕೋವಿಡ್ ಲಸಿಕೆ ಕುರಿತು ಜಾಗೃತಿ ಮೂಡಿಸಲಾಗುವುದೆಂದು ,ಅವರು ತಿಳಿಸಿದರು.
ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆ ರಾಜ್ಯಾಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ಮಾತನಾಡಿ, ಕೇಂದ್ರ ಸರ್ಕಾರ ಅಭಿವೃದ್ಧಿ ಪರ ಚಿಂತನೆಯೊಂದಿಗೆ ಆಡಳಿತ ನಡೆಸುತ್ತಿದ್ದು, ಜನರ ಸಹಕಾರದ ಅಗತ್ಯವಿದೆ ಎಂದರು.
ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯಾದರೆ ಇಡೀ ದೇಶ ಅಭಿವೃದ್ಧಿಯಾದಂತೆ ಎಂದು ಅಭಿಪ್ರಾಯಪಟ್ಟ ಅವರು, ಪಕ್ಷದ ಎಲ್ಲಾ ಘಟಕಗಳು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕೆಂದು ಕರೆ ನೀಡಿದರು.
ವೃತ್ತಿಪರ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಡಾ.ಮೋಹನ್ ಅಪ್ಪಾಜಿ ಮಾತನಾಡಿ, ದಾನಿಗಳಿಂದ ನೆರವು ಪಡೆದು ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ಕೃತಕ ಕಾಲು ವಿತರಿಸಲಾಗುತ್ತದೆ. ಇದು 2ನೇ ಹಂತದ ಕಾರ್ಯಕ್ರಮವಾಗಿದ್ದು, ಶ್ರವಣ ಸಮಸ್ಯೆ ಇರುವ ಫಲಾನುಭವಿಗಳಿಗೆ ಈಗಾಗಲೇ ಶ್ರವಣ ಸಾಧನ ವಿತರಿಸಲಾಗಿದೆ ಎಂದರು.
ಪ್ರಕೋಷ್ಠದ ರಾಜ್ಯ ಸಹ ಸಂಚಾಲಕ ರವೀಂದ್ರ ಪೈ ಮಾತನಾಡಿ, ಸೇವೆ ಮತ್ತು ಸಂಘಟನೆಯ ಕುರಿತು ವಿವರಿಸಿದರು.
ಜಿ.ಪಂ ಅಧ್ಯಕ್ಷ ಬಿ.ಎ.ಹರೀಶ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ ಕಾಳಪ್ಪ, ವೃತ್ತಿಪರ ಪ್ರಕೋಷ್ಠದ ಸಹ ಸಂಚಾಲಕ ವಿ.ಎ.ಮಂಜುನಾಥ್, ಬಿಜೆಪಿ ಮಡಿಕೇರಿ ತಾಲೂಕು ಅಧ್ಯಕ್ಷ ಕಾಂಗೀರ ಸತೀಶ್, ನಗರಾಧ್ಯಕ್ಷ ಮನು ಮಂಜುನಾಥ್, ವೈದ್ಯಕೀಯ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಡಾ.ಮಾತಂಡ ಅಯ್ಯಪ್ಪ ಮತ್ತಿತರ ಪ್ರಮುಖರು ಹಾಗೂ ಕಾರ್ಯಕರ್ತರು ಹಾಜರಿದ್ದರು.
ಕಾರ್ಯಕ್ರಮದಲ್ಲಿ ಉಚಿತ ಕೃತಕ ಕಾಲು ಜೋಡಣೆ ಮಾಡಲಾಯಿತಲ್ಲದೆ, ಮಧುಮೇಹ ಕುರಿತು ಸಲಹೆ ನೀಡಲಾಯಿತು.