ಬಿಜೆಪಿ ʼಮೊಟ್ಟೆʼ ಪ್ರಕರಣದಲ್ಲಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದೆ: ಎ.ಎಸ್.ಪೊನ್ನಣ್ಣ ಆರೋಪ

ಮಡಿಕೇರಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣದಲ್ಲಿ ರಾಜಕೀಯ ಲಾಭ ಪಡೆಯುವ ಯತ್ನವನ್ನು ಬಿಜೆಪಿ ಮಾಡುತ್ತಿದೆ ಎಂದು ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್.ಪೊನ್ನಣ್ಣ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಏನೇನೋ ತಂತ್ರಗಾರಿಕೆಯ ಮೊರೆ ಹೋಗುತ್ತಿದ್ದು, ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಜಾತಿ, ಧರ್ಮದ ಹೆಸರಿನಲ್ಲಿ ನಡೆಯುವ ರಾಜಕಾರಣವನ್ನು ಜನರು ಬೆಂಬಲಿಸಬಾರದು ಎಂದು ಮನವಿ ಮಾಡಿದ ಅವರು, ಜಿಲ್ಲೆಯ ಅನೇಕ ಸಮಸ್ಯೆಗಳಿಗೆ ಇನ್ನೂ ಪರಿಹಾರ ದೊರೆತಿಲ್ಲ. ಅಭಿವೃದ್ಧಿ ಪರ ಕೆಲಸ ಮಾಡಬೇಕಾದ ಸರಕಾರ ಪ್ರಚೋದನಾಕಾರಿ ರಾಜಕಾರಣ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಹೇಳಿದರು.
ಆ.26ರಂದು ಕಾಂಗ್ರೆಸ್ ಪ್ರತಿಭಟನೆ ದಿನದಂದು ಬಿಜೆಪಿ ಸಮಾವೇಶಕ್ಕೆ ಕರೆ ನೀಡಿರುವುದು ಹಾಸ್ಯಾಸ್ಪದ. ಇದು ಸಂಘರ್ಷ ಸೃಷ್ಟಿಗೆ ಕಾರಣವಾಗಬಹುದು. ಕೊಡಗಿನ ಇಬ್ಬರು ಶಾಸಕರ ವೈಫಲ್ಯದಿಂದ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸೋಲು ಸ್ಪಷ್ಟ ಎಂಬ ಆಂತರಿಕ ವರದಿ ಬಿಜೆಪಿ ಹೈಕಮಾಂಡ್‌ಗೆ ತಲುಪಿದೆ. ಇದಕ್ಕಾಗಿ ಈ ರೀತಿಯ ವಾತಾವರಣವನ್ನು ಬಿಜೆಪಿ ಸೃಷ್ಟಿ ಮಾಡುತ್ತಿದೆ ಎಂದು ದೂರಿದರು.
ಪ್ರಕರಣದಿಂದ ಪಾರಾಗಲು ಬಿಜೆಪಿ ಕಸರತ್ತು ಮಾಡುತ್ತಿದೆ. ಕಾಂಗ್ರೆಸ್ ಕಾರ್ಯಕರ್ತ ಎಂದು ಬಿಂಬಿಸುವ ಯತ್ನವಾಗುತ್ತಿದೆ. ವಿಚಾರವನ್ನು ದಿಕ್ಕುತಪ್ಪಿಸುವ ಕೆಲಸ ಬಿಜೆಪಿಯಿಂದ ಹೊಸದೇನಲ್ಲ. ಸಿದ್ದರಾಮಯ್ಯ ನಾಯಕತ್ವದಿಂದ ವಿಚಲಿತಗೊಂಡ ಬಿಜೆಪಿ ಇದೀಗ ಸಮಾವೇಶ ನಡೆಸಲು ಮುಂದಾಗಿದೆ ಎಂದರು.
ಪ್ರತಿಭಟನೆಗೆ ಅವಕಾಶ ನೀಡಿ: ಕಾಂಗ್ರೆಸ್ ಪ್ರತಿಭಟನೆಗೆ ಅವಕಾಶ ನೀಡುಬೇಕು ಎಂದು ಹೇಳಿದ ಪೊನ್ನಣ್ಣ, ನಿಷೇಧಾಜ್ಞೆ ಜಾರಿಗೊಳಿಸಿದರೆ ನಾವು ಕಾನೂನಿಗೆ ತಲೆಬಾಗುತ್ತೇವೆ. ಒಬ್ಬರಿಗೆ ಅವಕಾಶ ನೀಡಿ, ಮತ್ತೊಂದು ಕಾರ್ಯಕ್ರಮಕ್ಕೆ ನಿರ್ಬಂಧ ಹೇರಿದರೆ ಸರಿಯಲ್ಲ. ಎರಡೂ ಕಾರ್ಯಕ್ರಮಕ್ಕೂ ಸಮಾನ ಅವಕಾಶ ನೀಡಲಿ, ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಸೂಕ್ತ ಭದ್ರತೆ ಒದಗಿಸಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಸಾಮಾಜಿಕ ಜಾಲತಾಣ ಘಟಕದ ಅಧ್ಯಕ್ಷ ಸೂರಜ್ ಹೊಸೂರು, ಮಡಿಕೇರಿ ನಗರಾಧ್ಯಕ್ಷ ರಾಜೇಶ್ ಯಲ್ಲಪ್ಪ ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!