ಬಿಜೆಪಿ ಸೇರ್ಪಡೆ ಎಂದರೆ ಸಕ್ಕರೆಯು ಹಾಲಿನಲ್ಲಿ ಬೆರೆತಂತೆ: ನಳೀನ್ ಕುಮಾರ ಕಟೀಲ್

ಹೊಸ ದಿಗಂತ ಡಿಜಿಟಲ್ ಡೆಸ್ಕ್

ನಮ್ಮ ಪಕ್ಷ ಕಾರ್ಯಕರ್ತರ ಆಧರಿತ ಪಕ್ಷ. ಕಾಂಗ್ರೆಸ್ ಪಕ್ಷದಲ್ಲಿ ಮೂಲ ನಿವಾಸಿಗರು ಮತ್ತು ವಲಸಿಗರು ಎಂಬ ಭಾವನೆ, ಕಿತ್ತಾಟ ಇದೆ. ವಲಸಿಗ ಮುಖ್ಯಮಂತ್ರಿ ಆಗಬೇಕೇ ಅಥವಾ ಮೂಲ ನಿವಾಸಿ ಸಿಎಂ ಆಗಬೇಕೇ ಎಂಬ ಚರ್ಚೆ ಕಾಂಗ್ರೆಸ್ಸಿನಲ್ಲಿ ನಡೆಯುತ್ತಿದೆ. 5 ವರ್ಷ ಆಡಳಿತ ಮಾಡಿ 2018ರಲ್ಲಿ ಚುನಾವಣೆಗೆ ಹೋದಾಗ ಮುನಿರತ್ನ, ಸುಧಾಕರ್, ಲಕ್ಷ್ಮೀನಾರಾಯಣ ಅಲ್ಲಿದ್ದರು. ಆದರೂ ಪಡೆದುದು ಕೇವಲ 80 ಸೀಟು. ಅವರೆಲ್ಲ ಬಿಜೆಪಿಯಲ್ಲಿದ್ದಾರೆ. ಆದ್ದರಿಂದ ನಮ್ಮ ಸೀಟು ಹೆಚ್ಚಲಿದೆ. ಕಾಂಗ್ರೆಸ್ ಸೀಟು ಇನ್ನಷ್ಟು ಕಡಿಮೆ ಆಗಲಿದೆ.ನಮ್ಮ ಪಕ್ಷ ಹಾಲು ಇದ್ದಂತೆ. ಸ್ವಲ್ಪ ಸಕ್ಕರೆ ಹಾಕಿದಾಗ ಸಕ್ಕರೆ ಕಾಣುವುದಿಲ್ಲ. ಆದರೆ, ಹಾಲು ಸಿಹಿ ಆಗುತ್ತದೆ ಇದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾಡಿದ ವಿಶ್ಲೇಷಣೆ.

ಕಾಂಗ್ರೆಸ್ ಮಾಜಿ ರಾಜ್ಯ ಕಾರ್ಯದರ್ಶಿ ಸಪ್ತಗಿರಿ ಶಂಕರ್ ನಾಯಕ್, ವೀರಶೈವ ಮಹಾಸಭಾ ಅಧ್ಯಕ್ಷ ರೇಣುಕಾ ಪ್ರಸಾದ್, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಬುದಿಹಾಳ್ ಹನುಮಂತರಾಜು, ಕಾಂಗ್ರೆಸ್ ರಾಜ್ಯ ಕಾರ್ಯಕಾರಿಣಿ ಸದಸ್ಯ ತುಳಸಿ ರಾಮ್, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಉಮೇಶ್ ಅವರು ಬೆಂಬಲಿಗರ ಜೊತೆಗೆ ಬಿಜೆಪಿ ಸೇರಿದರು.

ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶ ಅತ್ಯುನ್ನತ ಸ್ಥಾನಕ್ಕೆ ಏರಿದೆ. ಮೋದಿಯವರ ಶತಾಯುಷಿ ತಾಯಿಯವರ ನಿಧನ ಆದಾಗ ಮಗನಾಗಿ ಅಂತ್ಯಸಂಸ್ಕಾರವನ್ನು ಮಾಡಿ, ಕೇವಲ ಎರಡೂವರೆ ಗಂಟೆಯಲ್ಲಿ ದೇಶದ ಕಾರ್ಯಕ್ಕೆ ಮತ್ತೆ ಮರಳಿದರು. ಇದು ನಮ್ಮ ನಾಯಕರ ಆದರ್ಶ. ಇಂಥ ಆದರ್ಶಗಳಿಂದ ನಮ್ಮ ಪಕ್ಷ ಬೆಳೆದಿದೆ ಎಂದು ತಿಳಿಸಿದರು.

ರಾಜ್ಯದ ಆರೋಗ್ಯ, ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾ. ಕೆ.ಸುಧಾಕರ್ ಅವರು ಮಾತನಾಡಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಂದ ಕೋಲಾರ, ಚಿಕ್ಕಬಳ್ಳಾಪುರ, ಗ್ರಾಮಾಂತರ ಮತ್ತಿತರ ಜಿಲ್ಲೆಗಳಿಂದ ಅನೇಕ ಮುಖಂಡರು ಬಿಜೆಪಿ ಸೇರುತ್ತಿರುವುದು ಚುನಾವಣಾ ಫಲಿತಾಂಶದ ದಿಕ್ಸೂಚಿ ಎಂದು ವಿಶ್ಲೇಷಿಸಿದರು.

ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾಣ, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ, ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯ ಮುನಿರಾಜು, ಹಿರಿಯ ನಾಯಕ ಲಕ್ಷ್ಮೀನಾರಾಯಣ ಮತ್ತು ಪಕ್ಷದ ಪದಾಧಿಕಾರಿಗಳು ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!