ದಿಗಂತ ವರದಿ ಮಂಡ್ಯ :
ಕಾಂಗ್ರೆಸ್ನ್ ಓಲೈಕೆ ರಾಜಕಾರಣ, ಅತಿಯಾದ ಭ್ರಷ್ಟಾಚಾರದಿಂದ ಸಿಡಿದು ಹೊರಬಂದ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರು ಸತ್ಯ ಹೇಳುವುದು ಬಂಡಾಯವಾದರೆ, ನಾನೊಬ್ಬ ಬಂಡಾಯಗಾರನೇ ಸರಿ ಎಂದು ಕಾಂಗ್ರೆಸ್ ವಿರುದ್ಧ ಸೆಡ್ಡು ಹೊಡೆದ ಜಯಪ್ರಕಾಶ್ನಾರಾಯಣ್ರವರ ಹೆಸರೇಳಿಕೊಂಡು ಅಧಿಕಾರ ಅನುಭವಿಸಿದ ಜೆಡಿಎಸ್ನದ್ದು ಇಬ್ಬಗೆಯ ನೀತಿಯಾಗಿದೆ ಎಂದು ಬಿಜೆಪಿ ಮುಖಂಡ ಸಿ.ಟಿ. ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು.
ಜಯಪ್ರಕಾಶ್ನಾರಾಯಣ್ರವರ ಆದರ್ಶಗಳನ್ನು ಒಪ್ಪಿ ನಡೆದುಕೊಳ್ಳುವುದಾಗಿ ತಿಳಿಸಿದ್ದ ಜೆಡಿಎಸ್ ತನ್ನ ಪಕ್ಷದ ರಾಜ್ಯ ಕಚೇರಿಗೆ ಜೆ.ಪಿ. ಭವನ ಎಂದು ಹೆಸರಿಟ್ಟುಕೊಂಡು ಜೆಪಿ ವಿರೋಧಿಸಿದ್ದ ಕಾಂಗ್ರೆಸ್ಗೆ ಮತ ನೀಡಿ ಎಂದು ಹೇಳುತ್ತಲೇ ಸಖ್ಯ ಬೆಳೆಸಲು ಮುಂದಾಗಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ದೂರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಶಾಂತವಾಗಿದೆ. ಇತರೆ ಎಲ್ಲ ರಾಜ್ಯಗಳಂತೆ ಅಲ್ಲೂ ಸಹ ಉತ್ತಮ ಆಡಳಿತ ನಿರ್ವಹಣೆ ಇದೆ. ಇಂತಹ ಸಂದರ್ಭದಲ್ಲಿ ವಿರೋಧಿಗಳು ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾರೆ. ಅಲ್ಲಿನ ಜಿಹಾದಿಗಳು ಹಿಂದೂ ಮತ್ತು ಸಿಖ್ ಸಮುದಾಯವನ್ನು ಗುರಿಯಾಗಿಸಿಕೊಂಡು ಕಲ್ಲು ಮತ್ತು ಇತರೆ ಮಾರಕಾಸಗಳಿಂದ ದಾಳಿ-ಹಲ್ಲೆ ನಡೆಸುವಂತಹ ಕ್ರಮಕ್ಕೆ ಮುಂದಾಗಿದ್ದಾರೆ. ಇಂತಹ ಚಟುವಟಿಕೆಗೆ ವಿರೋಧ ಪಕ್ಷಗಳೇ ಕಾರಣವಾಗಿದೆ. ಇದನ್ನು ಮುಚ್ಚಿಟ್ಟುಕೊಳ್ಳುವ ಉದ್ದೇಶದಿಂದ ಜೆಡಿಎಸ್ ಬಿಜೆಪಿ ಮತ್ತು ಆರ್ಎಸ್ಎಸ್ ಕಾರಣ ಎಂದು ದೂಷಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆ ತಾಲಿಬಾನ್ ಪರವಾಗಿದೆ. ತಾಲಿಬಾನ್ನಲ್ಲಿರುವ ಆಡಳಿತ ಕಾಶ್ಮೀರದಲ್ಲಿ ನಡೆಯಬೇಕು ಎಂಬುದು ಅವರ ಉದ್ದೇಶವಾಗಿದೆ ಎಂದು ಆರೋಪಿಸಿದ್ದಾರೆ.