ಮಹಿಳೆಗೆ ಮನೆ, ಶೌಚಾಲಯಗಳನ್ನು ಪಕ್ಕಾ ಆಗಿಸಿದ್ದು ಬಿಜೆಪಿ, ಕಾಂಗ್ರೆಸ್ಸಿನದ್ದು ಕೇವಲ ಬಾಯ್ಮಾತಿನ ಗ್ಯಾರಂಟಿ- ಶೋಭಾ ಕರಂದ್ಲಾಜೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಮಹಿಳೆಯರಿಗೆ ಮತ್ತು ಯುವಕರಿಗೆ ಹಲವು ಗ್ಯಾರಂಟಿ ಭರವಸೆಗಳನ್ನು ಕೊಟ್ಟು ಕಾಂಗ್ರೆಸ್ ಕರ್ನಾಟಕದ ವಿಧಾನಸಭೆ ಚುನಾವಣೆ ಎದುರಿಸಲು ಹೊರಟಿರುವ ಸಂದರ್ಭದಲ್ಲಿ, ಬಿಜೆಪಿ ವತಿಯಿಂದ ಮಂಗಳವಾರ ಶೋಭಾ ಕರಂದ್ಲಾಜೆ ಮಾಡಿದ ಪತ್ರಿಕಾಗೋಷ್ಟಿ ಇವುಗಳಿಗೆ ಪ್ರತಿಕ್ರಿಯೆಯಂತಿತ್ತು.

ಬಿಜೆಪಿ ಅದಾಗಲೇ ಮಹಿಳೆಯರ ಬದುಕನ್ನು ತನ್ನ ನಾನಾ ಯೋಜನೆಗಳ ಮೂಲಕ ಹೇಗೆ ಬದಲಿಸಿದೆ ಎಂಬ ಅಂಶಗಳನ್ನು ಅವರು ತೆರೆದಿಟ್ಟರು. “ಉತ್ತರ ಕರ್ನಾಟಕದಲ್ಲಿ ಮಹಿಳೆಯರು ಶೌಚಕ್ಕೆ ಹೋಗಲು ಸಂಜೆವರೆಗು ಕಾಯಬೇಕಿರುವ ಪರಿಸ್ಥಿತಿ ಇತ್ತು. ಇದನ್ನು ನಾವು ಉತ್ತರ ಕರ್ನಾಟಕ ಪ್ರವಾಸ ಸಂದರ್ಭದಲ್ಲಿ ಗಮನಿಸಿದ್ದೇನೆ. ಇಂಥಹ ಸಮಸ್ಯೆಯನ್ನು ಅರಿತ ಮೋದಿಜಿ ಅವರು ಶೌಚಾಲಯಗಳನ್ನು ನಿರ್ಮಿಸಿದರು. ಈ ಮೂಲಕ ಶೌಚಾಲಯ ನಿರ್ಮಾಣದ ಕ್ರಾಂತಿ ಮಾಡಿದರು” ಎಂದು ಕರಂದ್ಲಾಜೆ ವಿವರಿಸಿದರು.

ಮನೆ-ಶೌಚಾಲಯ-ಅನಿಲ ಸಂಪರ್ಕ

“ಮೋದಿಜಿ ವಾರಣಾಸಿಯಲ್ಲಿ ಪೊರಕೆ ಹಿಡಿದರೆ ದೇಶ ಸ್ವಚ್ಛ ಅಗುತ್ತಾ ಎಂದು ಕಾಂಗ್ರೆಸ್‍ನವರು ವ್ಯಂಗ್ಯವಾಗಿ ನಕ್ಕು ಟೀಕಿಸಿದ್ದರು. ಆದರೆ ಶೌಚಾಲಯ ನಿರ್ಮಾಣಕ್ಕೆ ಎಸ್.ಸಿ/ಎಸ್.ಟಿ ಸಮುದಾಯಗಳಿಗೆ 15 ಸಾವಿರ ರುಪಾಯಿ, ಹಿಂದುಳಿದ ವರ್ಗಗಳ ಮನೆಗಳಿಗೆ 12 ಸಾವಿರ ರುಪಾಯಿ ಕೊಡಲಾಯಿತು. 11 ಕೋಟಿಗೂ ಹೆಚ್ಚು ಶೌಚಾಲಯಗಳ ನಿರ್ಮಾಣ ಮತ್ತು ಹೊಸದಾಗಿ ಯಾವುದೇ ಮನೆ ನಿರ್ಮಾಣ ಮಾಡಿದರು ಶೌಚಾಲಯ ಕಡ್ಡಾಯ ಎಂದು ಸುತ್ತೋಲೆ ಹೊರಡಿಸಲಾಗಿದೆ” ಎಂದು ತಿಳಿಸಿದರು.

“ಗ್ಯಾಸ್ ಕನೆಕ್ಷನ್‍ಗೆ ಎಂ.ಪಿ ಗಳ ಶಿಫಾರಸು ಪತ್ರ ಬೇಕಾಗಿತ್ತು. ಅದರೆ ಈಗ ಗ್ಯಾಸ್ ಇಲ್ಲದ ಮನೆಗೆ ಗ್ಯಾಸ್ ಸಂಪರ್ಕ ನೀಡಲಾಗಿದೆ. ಮೋದಿಜಿ ಸರ್ಕಾರದಲ್ಲಿ ಉಚಿತ ಗ್ಯಾಸ್ ನೀಡುವ ಕೆಲಸವನ್ನೂ ಮಾಡಿದ್ದಾರೆ.“

ಮಹಿಳೆ, ವೃದ್ಧರಿಗೆ ಹೆಚ್ಚಿನ ಅನುಕೂಲ

ಶೌಚಾಲಯ ವ್ಯವಸ್ಥೆ ಮತ್ತು ಉಜ್ವಲ ಯೋಜನೆಯನ್ನು ಮನೆ ಮನೆಗೆ ನೀಡಲಾಗಿದೆ. ವಿಧವಾ ವೇತನವನ್ನು ಬಿಎಸ್ ಯಡಿಯೂರಪ್ಪ ಅವರು ಸಂಪುಟ ಸಭೆಯಲ್ಲಿ 200 ರಿಂದ 500 ರೂ ಹೆಚ್ಚಳ ಮಾಡಿದ್ದರು. ಈಗ 1000 ರೂ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ವೃದ್ಧರಿಗೆ ಸಂಧ್ಯಾ ಸುರಕ್ಷಾ ಯೋಜನೆ ಜಾರಿ ಮಾಡಿದ್ದೇವೆ. ಯಡಿಯೂರಪ್ಪ ಅವರು ಕೊಟ್ಟ ಮಾತಿನಂತೆ ಪಿಂಚಣಿ ಕೊಡುತ್ತಿದ್ದಾರೆ. ಮನೆಯಲ್ಲಿರುವ ವೃದ್ಧ ವೃದ್ಧೆಗೆ ಸೇರಿ 2400 ರೂ ಕೊಡಲಾಗುತ್ತಿದೆ ಎಂದರು.

ಕಾಂಗ್ರೆಸ್ ಪಕ್ಷ ಇವತ್ತು ಗ್ಯಾರಂಟಿ ಕುರಿತು ಮಾತನಾಡುತ್ತಿದೆ. ತಮ್ಮ ಸರಕಾರ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಮುಖಂಡರು ಏನನ್ನೂ ಮಾಡಲಿಲ್ಲ. ಬಡವರ ಕುರಿತು ಕಳಕಳಿ ಅವರಿಗಿರಲಿಲ್ಲ. ಕುರ್ಚಿ ರಾಜಕೀಯವಷ್ಟೇ ಅವರಿಗೆ ಬೇಕಿತ್ತು ಎಂದು ಟೀಕಿಸಿದರು.

ರಾಜಸ್ಥಾನ-ಛತ್ತೀಸಗಢಗಳಲ್ಲಿ ಈಡೇರದ ಕಾಂಗ್ರೆಸ್ ಗ್ಯಾರಂಟಿಗಳು

ಕಾಂಗ್ರೆಸ್ಸಿಗರಿಗೆ ಬಡವರ ಕಷ್ಟ, ಬಡತನದ ಅರಿವೇ ಇಲ್ಲ ಎಂದು ಆರೋಪಿಸಿದ ಅವರು, ಜನರ ಮಧ್ಯೆಯಿಂದ ಬಂದ ನಾಯಕರು ಯಡಿಯೂರಪ್ಪ ಮತ್ತು ಮೋದಿಜಿ. ಅವರು ಭರವಸೆ ನೀಡದೆಯೇ ಜನರ ಕಷ್ಟ ಅರ್ಥ ಮಾಡಿಕೊಂಡು ಜನರಿಗೆ ಸಹಾಯ ಮಾಡುತ್ತಿದ್ದಾರೆ. ಕಾಂಗ್ರೆಸ್ ಭರವಸೆ ಕೇವಲ ಆಶ್ವಾಸನೆಯಾಗಿಯೇ ಉಳಿಯಲಿದೆ. ಕಾಂಗ್ರೆಸ್ ಆಡಳಿತ ಇರುವ ರಾಜಸ್ಥಾನ ಮತ್ತು ಛತ್ತಿಸ್‍ಘಡದಲ್ಲಿ ಕಾಂಗ್ರೆಸ್ ಮುಖಂಡರೇ ಸಿಡಿದೆದ್ದಿದ್ದಾರೆ. ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಈಡೇರಿಸದೆ ಇರುವುದೇ ಇದಕ್ಕೆ ಕಾರಣ ಎಂದು ವಿಶ್ಲೇಷಿಸಿದರು.

ಮನೆ-ಮನೆಗೆ ನೀರು

ಬಜೆಟ್‍ನಲ್ಲಿ ಹಣ ನೀಡಿ ಇಂತಹ ಕೆಲಸ ಮಾಡಿ ಎಂದು ಹೇಳಿರುವ ವ್ಯಕ್ತಿ ನಮ್ಮ ಮೋದಿಜಿ. ಜಲಜೀವನ್ ಮಿಷನ್ ಯೋಜನೆಯಡಿ ನದಿ ಮೂಲದ ಮೇಲ್ಮೈ (ಸರ್‍ಫೇಸ್) ನೀರು ನೀಡುವ ಯೋಜನೆಯನ್ನು ಮೋದಿಜಿ ಸರ್ಕಾರ ಮಾಡುತ್ತಿದೆ. ಶಾಲೆ ಮತ್ತು ಅಂಗನವಾಡಿ ಶೌಚಾಲಯಗಳಿಗೆ ಈ ಯೋಜನೆ ಮುಖ್ಯವಾಗಿ ರೂಪಿಸಲಾಗಿದೆ. ನಾವು 99% ಪ್ರಣಾಳಿಕೆಯ ಭರವಸೆಗಳನ್ನುಈಡೇರಿಸಿದ್ದೇವೆ. ಕೋವಿಡ್ ಸಾಂಕ್ರಾಮಿಕದ ಕಾರಣ ಭರವಸೆ ಈಡೇರಿಸಲು ಸ್ವಲ್ಪ ತೊಡಕಾಗಿದೆ ಎಂದು ವಿವರಿಸಿದರು.

ಕಾಂಗ್ರೆಸ್‍ನಲ್ಲಿ 4 ಸಿಎಂ ಅಭ್ಯರ್ಥಿಗಳು

ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ 4 ಮುಖ್ಯಮಂತ್ರಿ ಅಭ್ಯರ್ಥಿಗಳಿದ್ದಾರೆ. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಎಂ.ಬಿ.ಪಾಟೀಲ್ ಅವರಲ್ಲದೆ, ಮಲ್ಲಿಕಾರ್ಜುನ ಖರ್ಗೆ ಅವರೂ ಸಿಎಂ ಅಭ್ಯರ್ಥಿ ಆಗಿದ್ದಾರೆ. ಇದರ ಬಗ್ಗೆಯೇ ಜಗಳವಾಗುತ್ತಿದೆ ಎಂದು ತಿಳಿಸಿದರು.

ರಾಜ್ಯ ಮುಖ್ಯ ವಕ್ತಾರ ಎಂ.ಜಿ.ಮಹೇಶ್, ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಶ್ರೀಮತಿ ಗೀತಾ ವಿವೇಕಾನಂದ, ವಿಧಾನಪರಿಷತ್ ಮಾಜಿ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!