ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ವರದಿ, ಮೈಸೂರು:
ಮೈಸೂರು ನಗರಪಾಲಿಕೆಯ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಭಾರತೀಯ ಜನತಾ ಪಕ್ಷ ಮೇಯರ್ ಹುದ್ದೆಯನ್ನು ಪಡೆದಿದೆ.
ಕಳೆದ ಒಂದು ತಿಂಗಳಿಂದ ನಡೆಯುತ್ತಿದ್ದ ರಾಜಕೀಯ ಹಗ್ಗಜಗ್ಗಾಟದಲ್ಲಿ ಕೊನೆಗೂ ಮೇಯರ್ ಹುದ್ದೆ ಪಡೆದುಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಈ ಮೂಲಕ ಬಿಜೆಪಿಯ ಸುನಂದಾ ಪಾಲನೇತ್ರ ಅವರು ನೂತನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಬಿಜೆಪಿಗೆ ಮೇಯರ್ ಪಟ್ಟ ಒಲಿಯಲಿದೆ ಎಂದು ಹೇಳುತ್ತಲೇ ಬಂದಿದ್ದ ಉಸ್ತುವಾರಿ ಸಚಿವರಾದ ಸೋಮಶೇಖರ್ ಹಾಗೂ ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ ಅವರ ಕಾರ್ಯತಂತ್ರ ಕೊನೆಗೂ ಯಶಸ್ವಿಯಾಗಿ ಫಲ ನೀಡಿದೆ.
ಮೈಸೂರು ಪಾಲಿಕೆಯ 38 ವರ್ಷದ ಇತಿಹಾದಲ್ಲೇ ಪ್ರಥಮ: 160ಕ್ಕೂ ಹೆಚ್ಚು ವರ್ಷದ ಇತಿಹಾಸ ಹೊಂದಿರುವ ಮೈಸೂರು ಪೌರ ಸಂಸ್ಥೆಯು 1983ರಲ್ಲಿ ಮಹಾನಗರ ಪಾಲಿಕೆಯಾಗಿ ಹೊರಹೊಮ್ಮಿತು. ಅಲ್ಲಿಂದ ಇಲ್ಲಿಯವರೆಗಿನ 38 ವರ್ಷದ ಅವಧಿಯಲ್ಲಿ ಬಿಜೆಪಿ ಒಂದು ಬಾರಿಯೂ ಮೇಯರ್ ಪಟ್ಟವನ್ನು ಅಲಂಕರಿಸಿರಲಿಲ್ಲ. ಇದೀಗ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸರ ಕಾರ್ಯತಂತ್ರದ ಫಲವಾಗಿ ಬಿಜೆಪಿ ಸಾಧನೆ ತೋರಿದೆ.
ಬಿಜೆಪಿ ರಾಜ್ಯಾಧ್ಯಕ್ಷರಿಂದ ಅಭಿನಂದನೆ: ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ದೂರವಾಣಿ ಕರೆ ಮಾಡಿ ಅಭಿನಂದನೆ ತಿಳಿಸಿದ್ದಾರೆ. ಮೈಸೂರಿನಲ್ಲಿ ಬಿಜೆಪಿ ಪಾಲಿಗೆ ಹೊಸ ಇತಿಹಾಸ ಸೃಷ್ಟಿ ಮಾಡಿದ್ದಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಲ್ಲದೆ, ಪಕ್ಷಕ್ಕಾಗಿ ಸೇವೆ ಹೀಗೆಯೇ ಮುಂದುವರಿಯಲಿ ಎಂದು ತಿಳಿಸಿದ್ದಾರೆ.
ಶ್ಲಾಘಿಸಿದ ಸಿಎಂ: ಮೈಸೂರು ಮಹಾನಗರ ಪಾಲಿಕೆಯ 38 ವರ್ಷಗಳ ಇತಿಹಾಸದಲ್ಲಿ ಬಿಜೆಪಿ ಪ್ರಥಮ ಬಾರಿಗೆ ಮೇಯರ್ ಪಟ್ಟವನ್ನು ಹೊಂದಿದೆ. ಇದಕ್ಕೆ ಸಹಕಾರ ಸಚಿವರಾಗಿರುವ ಎಸ್.ಟಿ.ಸೋಮಶೇಖರ್ ಅವರ ಪಾತ್ರ ಬಹಳ ದೊಡ್ಡದಿದೆ. ಪಕ್ಷಕ್ಕಾಗಿ ಅವರ ದುಡಿಮೆ, ಶ್ರಮ ನಿಜಕ್ಕೂ ಸಾರ್ಥಕವಾಗಿದೆ. ಈ ಅವಕಾಶವನ್ನು ಪಕ್ಷ ಸದುಪಯೋಗಪಡಿಸಿಕೊಂಡು ಮೈಸೂರಿನಲ್ಲಿ ಮತ್ತಷ್ಟು ಅಭಿವೃದ್ಧಿಯನ್ನು ಮಾಡಿ ತೋರಿಸಲಿ ಎಂದು ಹಾರೈಸುವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.