ಮತದಾರರ ಪಟ್ಟಿ ಪರಿಷ್ಕರಣೆ: ಕೋತಿ ಮೊಸರು ತಿಂದು ಮೇಕೆ ಬಾಯಿಗೆ ಸವರಿದಂತಾಗಿದೆ-ಟ್ವೀಟ್‌ ಮೂಲಕ ಸುಧಾಕರ್‌ ಟೀಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮತದಾರರ ಪಟ್ಟಿ ಪರಿಷ್ಕರಣೆ ವಿಚಾರವಾಗಿ ಬಿಜೆಪಿ ವಿರುದ್ಧ ಗೂಬೆ ಕೂರಿಸುತ್ತಿರುವ ಕಾಂಗ್ರೆಸ್‌ ನಾಯಕರನ್ನು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್‌ ತರಾಟೆ ತೆಗೆದುಕೊಂಡಿದ್ದಾರೆ. ತಾವು ಮಾಡಿರುವ ಕೆಲಸವನ್ನು ಬಿಜೆಪಿ ಮೇಲೆ ಹಾಕುವ ಹುನ್ನಾರ ನಡೆಸುತ್ತಿದ್ದಾರೆಂದು ಹರಿಹಾಯ್ದಿದ್ದಲ್ಲದೆ, ಸರಣಿ ಟ್ವೀಟ್‌ ಮೂಲಕ ಕಾಂಗ್ರೆಸ್‌ ಮಾಡಿರುವ ಕೆಲಸವನ್ನ ದಾಖಲೆ ಸಮೇತ ಬಿಡುಗಡೆ ಮಾಡಿದರು.

ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ 2017ರಲ್ಲಿ ಅಂದಿನ ಕಾಂಗ್ರೆಸ್ ಸರಕಾರವೇ ಅನುಮತಿ ಕೊಟ್ಟ ಒಂದು ಸಂಸ್ಥೆಯ ಮೇಲೆ ಈಗ ಇಲ್ಲಸಲ್ಲದ ಆರೋಪ ಮಾಡಿ ಬಿಜೆಪಿ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿರುವುದು ‘ಕೋತಿ ಮೊಸರು ತಿಂದು ಮೇಕೆ ಬಾಯಿಗೆ ಸವರಿದಂತಾಗಿದೆ.’ ಎಂದು ಟೀಕಿಸಿದರು. ಬಿಜೆಪಿ ಸರ್ಕಾರದ ವಿರುದ್ಧ ರಚನಾತ್ಮಕ ಹೋರಾಟ ಮಾಡಲು ಯಾವುದೇ ವಿಷಯಗಳಲ್ಲಿದೆ ಹತಾಶಗೊಂಡಿರುವ ಕಾಂಗ್ರೆಸ್ ನಾಯಕರು ದಿನಕ್ಕೊಂದು ಕಟ್ಟುಕಥೆ ಸೃಷ್ಟಿಸುವ ಹುನ್ನಾರ ನಡೆಸುತ್ತಿದ್ದು, ಬಿಜೆಪಿ ಪಕ್ಷ ಹಾಗೂ ಸರ್ಕಾರದ ವರ್ಚಸ್ಸಿಗೆ ಮಸಿ ಬಳಿಯುವ ಭರಾಟೆಯಲ್ಲಿ ತಮಗೆ ತಾವೇ ಮಸಿ ಬಳಿದುಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ದಿಟ್ಟ ನಾಯಕತ್ವ, ಅಭಿವೃದ್ಧಿ, ಸುಶಾಸನ, ಭ್ರಷ್ಟಾಚಾರ-ಮುಕ್ತ ಆಡಳಿತ ನೀಡುವ ಮೂಲಕ ದೇಶಾದ್ಯಂತ ಜನಮನ್ನಣೆ ಪಡೆಯುತ್ತಿರುವ ನಮ್ಮ ಪಕ್ಷಕ್ಕೆ ಚುನಾವಣೆ ಗೆಲ್ಲಲು ಯಾವುದೇ ವಾಮ ಮಾರ್ಗದ ಅವಶ್ಯಕತೆಯೂ ಇಲ್ಲ ಅದರ ಬಗ್ಗೆ ನಂಬಿಕೆಯೂ ಇಲ್ಲ. ಅದೇನಿದ್ದರೂ ಕಾಂಗ್ರೆಸ್‌ನ ಕೆಲಸ ಎನ್ನುವ ಅರ್ಥದಲ್ಲಿ ಹೇಳಿದ್ದಾರೆ.

‘ಕುಣಿಯಲಾರದವನಿಗೆ ನೆಲ ಡೊಂಕು’ ಎಂಬಂತೆ ಜನರ ವಿಶ್ವಾಸ ಕಳೆದುಕೊಂಡು ಹತಾಶಗೊಂಡಿರುವ ಕಾಂಗ್ರೆಸ್ ಪಕ್ಷ ಮತಯಂತ್ರಗಳ ಮೇಲೆ ಸಂಶಯ ಮೂಡಿಸುವುದು, ಚುನಾವಣಾ ಆಯೋಗದ ಬಗ್ಗೆ ಅಪಸ್ವರ ಎತ್ತುವುದು ಹೀಗೆ ಒಂದಲ್ಲಾ ಒಂದು ಕ್ಯಾತೆ ತೆಗೆಯುತ್ತಲೆ ಬಂದಿದ್ದು ಮತದಾರರ ಪಟ್ಟಿ ಪರಿಷ್ಕರಣೆ ಅಕ್ರಮ ಆರೋಪ ಈ ಸುಳ್ಳುಗಳ ಸರಮಾಲೆಗೆ ಹೊಸ ಸೇರ್ಪಡೆಯಷ್ಟೆ ಎಂದು ಆಕ್ರೋಶ ಹೊರಹಾಕಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!