ಹೊಸದಿಗಂತ ವರದಿ, ಸಕಲೇಶಪುರ:
ಕಾಂಗ್ರೆಸ್ ಸರ್ಕಾರ ವರ್ಗಾವಣೆಯ ದಂದೆ ನಡೆಸುತ್ತಿದ್ದು, ನೌಕರರು ಮತ್ತು ಅಧಿಕಾರಿಗಳು ಒಂದು ಜಾಗದಲ್ಲಿ ನೆಲೆ ನಿಂತು ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಸಾರ್ವಜನಿಕರು ದಿನ ಇಲಾಖೆಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶಾಸಕ ಸಿಮೆಂಟ್ ಮಂಜು ಆರೋಪ ಮಾಡಿದರು.
ತಾಲೂಕು ಭಾರತೀಯ ಜನತಾ ಪಾರ್ಟಿ ವತಿಯಿಂದ ನಡೆದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರವು ಭ್ರಷ್ಟಾಚಾರದಲ್ಲಿ ಮುಳುಗಿದ್ದು ಯಾವ ಇಲಾಖೆಯಲ್ಲೂ ಸರಿಯಾದ ಕೆಲಸಗಳಾಗುತ್ತಿಲ್ಲ,
ಕಾಂಗ್ರೆಸ್ ಸರ್ಕಾರ ವರ್ಗಾವಣೆಯ ದಂದೆ ನಡೆಸುತ್ತಿದ್ದು, ಸರಕಾರಿ ನೌಕರರು ಮತ್ತು ಅಧಿಕಾರಿಗಳು ಒಂದು ಜಾಗದಲ್ಲಿ ನೆಲೆ ನಿಂತು ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ, ಇಲಾಖೆಗಳಲ್ಲಿ ಯಾವುದೇ ರೀತಿಯ ಕೆಲಸವು ನಡೆಯುತ್ತಿಲ್ಲ . ಸಾರ್ವಜನಿಕರು ದಿನ ಇಲಾಖೆಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಿರುವ ರಾಜ್ಯ ಸರ್ಕಾರವು ಯಾವುದೇ ಅನುದಾನಗಳನ್ನು ಬಿಡುಗಡೆ ಮಾಡದೆ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿದೆ ಎಂದು ಆರೋಪ ಮಾಡಿದರು.
ಈಗಾಗಲೇ ಕೆಲವು ಕಡೆಗಳಲ್ಲಿ ಐಟಿ ದಾಳಿಯಿಂದ ಕೋಟಿಗಟ್ಟಲೆ ಹಣವು ದೊರೆತಿದ್ದು ಕರ್ನಾಟಕವನ್ನು ಕಾಂಗ್ರೆಸ್ ಸರ್ಕಾರವು ಎಟಿಎಂ ಮಾಡಿಕೊಂಡಿದ್ದು. ಬೇರೆ ರಾಜ್ಯಗಳ ಚುನಾವಣೆಗೆ ಕರ್ನಾಟಕದ ಹಣವನ್ನು ಕಾಂಗ್ರೆಸ್ ಸರ್ಕಾರವು ಬಳಸುತ್ತಿದೆ ಎಂದರು.
ಸಕಲೇಶಪುರ ಮಂಡಲ ಅಧ್ಯಕ್ಷರಾದ ಮಂಜುನಾಥ್ ಸಂಗಿ, ಮಾತನಾಡಿ ಕಾಂಗ್ರೆಸ್ ಸರ್ಕಾರವು ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ.
ಕೆಲವು ಪ್ರದೇಶಗಳಲ್ಲಿ ಹಿಂದೂಗಳು ವಾಸ ಮಾಡಲು ಸಾಧ್ಯವಾಗದೆ ಭಯದ ವಾತಾವರಣ ಸೃಷ್ಟಿಯಾಗಿದೆ. ಒಂದು ವರ್ಗದ ಪರವಾಗಿ ಕಾಂಗ್ರೆಸ್ ಸರ್ಕಾರ ಕೆಲಸ ಮಾಡುತ್ತಿದೆ ಎಂದು ದೂರಿದರು.
ಕಾಂಗ್ರೆಸ್ ಸರ್ಕಾರವು ತಾರತಮ್ಯ ನೀತಿಯನ್ನು ಅನುಸರಿಸುತ್ತಿದ್ದು ಮಹಿಳೆಯರಿಗೆ ಯಾವುದೇ ರೀತಿಯಾದ ಸ್ವಉದ್ಯೋಗವನ್ನು ನೀಡುತ್ತಿಲ್ಲ, ಜನರನ್ನು ಸೋಂಬೇರಿಗಳನ್ನಾಗಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿಯಾದ ಬಾಲರಾಜ್ ಅರವರು ಎಸಿ ಕಚೇರಿಗೆ ಮನವಿ ಪತ್ರ ನೀಡಿದರು.ನಂತರ ಮಾತನಾಡಿ ಕಾಂಗ್ರೆಸ್ ಸರ್ಕಾರವು ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದು , ಭ್ರಷ್ಟಾಚಾರದಲ್ಲಿ ಮುಳುಗಿ, ಕಮಿಷನ್ ದಂಧೆಯಲ್ಲಿ ತೊಡಗಿದ್ದಾರೆ ಈ ಸರ್ಕಾರವು ಹೆಚ್ಚು ದಿನ ಉಳಿಯುವುದಿಲ್ಲ ಎಂದು ಈ ಕೂಡಲೇ ಮುಖ್ಯಮಂತ್ರಿಗಳ ಹಾಗೂ
ಉಪ ಮುಖ್ಯಮಂತ್ರಿಗಳು ರಾಜೀನಾಮೆಗೆ ನೀಡಬೇಕೆಂದು ಪತ್ರದ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಆಕ್ರೋಶ ಹೊರಹಾಕಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ನರೇಶ್, ಪ್ರತಾಪ್, ಕೌಡಳ್ಳಿ ಲೋಹಿತ್ , ಅವರೆಕಾಳು ಪೃಥ್ವಿ ಸೇರಿದಂತೆ ಇತರರು ಹಾಜರಿದ್ದರು.