Thursday, February 29, 2024

“ರಾಮ ವಿರೋಧಿ ಸರ್ಕಾರ”- ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬೆಂಗಳೂರಿನಲ್ಲಿ ಬಿಜೆಪಿ ಪ್ರತಿಭಟನೆ

ಹೊಸದಿಗಂತ ವರದಿ ಬೆಂಗಳೂರು:

ರಾಜ್ಯದ ಕಾಂಗ್ರೆಸ್ ಸರಕಾರವು ಕರಸೇವಕರನ್ನು ಬಂಧಿಸುತ್ತಿರುವುದು ಖಂಡನೀಯ ಎಂದು ಶಾಸಕ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್‍ಕುಮಾರ್ ಅವರು ತಿಳಿಸಿದರು.

ರಾಮ ವಿರೋಧಿ ಸರಕಾರದ ವಿರುದ್ಧ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರ ಉಪಸ್ಥಿತಿಯಲ್ಲಿ ಇಂದು ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. 1992ರಲ್ಲಿ ಕರಸೇವಕರನ್ನು ಹತ್ಯೆ ಮಾಡಲು ಮುಂದಾಗಿತ್ತು. ಈಗ ಜವಾಬ್ದಾರಿಯುತ ಮುಖ್ಯಮಂತ್ರಿ ಸ್ಥಾನದಲ್ಲಿರುವ ಸಿದ್ದರಾಮಯ್ಯನವರ ಹಿಂದೂ ವಿರೋಧಿ ನೀತಿ ಸ್ಪಷ್ಟವಾಗುತ್ತದೆ ಎಂದು ಟೀಕಿಸಿದರು.
ಅಲ್ಪಸಂಖ್ಯಾತರ ಬಗ್ಗೆ ಅತಿಯಾದ ಒಲವು ನಿಮ್ಮದು. ಹಿಂದೆ ಟಿಪ್ಪು ಜಯಂತಿ ಮಾಡಿದ್ದೀರಿ. ಕನ್ನಡ ಭಾಷಾ ಹೋರಾಟಗಾರರನ್ನು ಬಂಧಿಸುತ್ತೀರಿ. ರೈತ ವಿರೋಧಿ ನಿಲುವು ನಿಮ್ಮದು ಎಂದು ಸಿದ್ದರಾಮಯ್ಯರ ಸರಕಾರದ ವಿರುದ್ಧ ಆಕ್ಷೇಪ ಸೂಚಿಸಿದರು.

ಈ ಸರಕಾರ ಹಿಂದೂ ವಿರೋಧಿ, ರೈತ ವಿರೋಧಿ, ಕನ್ನಡ ವಿರೋಧಿ ಎಂದು ಟೀಕಿಸಿದರು. ಈ ಹೋರಾಟ ಶ್ರೀಕಾಂತ್ ಪೂಜಾರಿಯವರ ಬಿಡುಗಡೆ ಆಗುವವರೆಗೆ ಮುಂದುವರೆಯಲಿದೆ ಎಂದು ಎಚ್ಚರಿಸಿದರು.
ಮಾಜಿ ಡಿಸಿಎಂ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಅವರು ಮಾತನಾಡಿ, ರಾಮಮಂದಿರ ನಮ್ಮ ಸ್ವಾಭಿಮಾನದ ಸಂಕೇತ ಎಂದು ನುಡಿದರು. ಹಲವಾರು ಸವಾಲುಗಳ ಬಳಿಕ ಇದರ ಪುನರ್ ನಿರ್ಮಾಣವಾಗಿದೆ. ಕರ್ನಾಟಕ ಮಾತ್ರವಲ್ಲದೆ ಇಡೀ ದೇಶ ಸಂಭ್ರಮ ಪಡುವ ಈ ಸುಸಂದರ್ಭದಲ್ಲಿ ಕಾಂಗ್ರೆಸ್ ಸರಕಾರದ ಕ್ರಮ ಅತ್ಯಂತ ಆಕ್ಷೇಪಾರ್ಹ ಮತ್ತು ಖಂಡನೀಯ ಎಂದು ತಿಳಿಸಿದರು. ಕರಸೇವಕರು ನೈಜ ರಾಷ್ಟ್ರ ಭಕ್ತರು. ಅವರನ್ನು ಗೌರವಿಸುವ ಬದಲಾಗಿ ಬಂಧಿಸುವ ಕಾರ್ಯ ನಡೆದಿದೆ ಎಂದು ಟೀಕಿಸಿದರು. ಸರಕಾರ ತನ್ನ ಭಂಡತನ ಕೈಬಿಡಬೇಕು. ಬಂಧಿತರನ್ನು ಬಿಡುಗಡೆ ಮಾಡದಿದ್ದರೆ ಹೋರಾಟ ತೀವ್ರವಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಮಾಜಿ ಸಿಎಂ, ಸಂಸದ ಡಿ.ವಿ. ಸದಾನಂದಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಮ್ ಗೌಡ, ಸಂಸದ ಪಿ.ಸಿ.ಮೋಹನ್, ಶಾಸಕ ರವಿಸುಬ್ರಹ್ಮಣ್ಯ, ವಿಧಾನಪರಿಷತ್ತಿನ ಮುಖ್ಯ ಸಚೇತಕ ಎನ್. ರವಿಕುಮಾರ್, ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಉಪಾಧ್ಯಕ್ಷೆ ಮಾಳವಿಕ ಅವಿನಾಶ್, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಎನ್.ಆರ್. ರಮೇಶ್ ಸೇರಿ ಅನೇಕ ಮುಖಂಡರು, ಶಾಸಕರು, ಮಾಜಿ ಸಚಿವರು, ರಾಜ್ಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!