ಹೊಸದಿಗಂತ ವರದಿ ಪುತ್ತೂರು:
ರಾಜ್ಯ ಸರಕಾರದ ಕಮಿಷನ್ ದಂಧೆ, ಭ್ರಷ್ಟಾಚಾರ ಹಾಗೂ ಜನ ನಿಲುವು ಖಂಡಿಸಿ, ಪ್ರತಿಭಟನೆ ಮತ್ತು ಸರಕಾರದ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬಿಜೆಪಿ ನೇತೃತ್ವದಲ್ಲಿ ಮಂಗಳವಾರ ಅಮರ್ ಜವಾನ್ ಸ್ಮಾರಕದ ಬಳಿ ಪ್ರತಿಭಟನೆ ನಡೆಯಿತು.
ಕರ್ನಾಟಕದಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ಪ್ರಾರಂಭದಿಂದಲೇ ರಾಜ್ಯದ ಜನರ ಹಿತಾಸಕ್ತಿಗೆ ವಿರುದ್ಧವಾದ ವರ್ತನೆ ತೋರುತ್ತಾ ಜನ ವಿರೋಧಿ ನೀತಿಯಿಂದಾಗಿ ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. ಹಿಂದಿನ ಬಿ.ಜೆ.ಪಿ.ಸರಕಾರ ಜಾರಿಗೆ ತಂದಿದ್ದಂತಹ ಹಲವು ಜನ ಪರ ಯೋಜನೆಗಳನ್ನು ರದ್ದುಗೊಳಿಸಿ, ರಾಜ್ಯದ ಅಭಿವೃದ್ಧಿಯನ್ನು ಕಡೆಗಣಿಸುವ ಮುಖಾಂತರ ಸರಕಾರವು ಜನರಿಗೆ ವಂಚನೆ ಮಾಡಿರುತ್ತದೆ. ಒಟ್ಟು ಅರಾಜಕತೆಯ ಆಡಳಿತ ರಾಜ್ಯದಲ್ಲಿ ತಾಂಡವವಾಡುತ್ತಿದೆ. ರಾಜ್ಯದ ಜನತೆ ಹಿಂದೆಂದೂ ಕಂಡರಿಯದ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದಾರೆ ಇಂದು ಮಾಜಿ ಶಾಸಕ ಸಂಜೀವ ಮಠ0ದೂರು ಹೇಳಿದರು.
ಇತ್ತೀಚೆಗೆ ಬೆಂಗಳೂರಿನಲ್ಲಿ ಅಂಬಿಕಾಪತಿ ಮತ್ತು ಸಂತೋಷ್ ಎಂಬ ಗುತ್ತಿಗೆದಾರರ ಮನೆಯಲ್ಲಿ ಕೋಟೆಗಟ್ಟಲೆ ನಗದು ಹಣವು ಐಟಿ ದಾಳಿಯಲ್ಲಿ ಸಿಕ್ಕಿದ್ದು, ಈ ಹಣವು ಕಮಿಷನ್ ರೂಪದಲ್ಲಿ ಬಂದಿರುವ ಹಣವಾಗಿದೆ ಎನ್ನುವುದು ಪುಚಲಿತವಾಗಿದೆ. ಕಾಂಗ್ರೆಸ್ ಸರಕಾರ ಗುತ್ತಿಗೆದಾರರಿಗೆ ನೀಡಿದ ಹಣ ರೂ.650 ಕೋಟೆಗೆ ಪ್ರತಿಯಾಗಿ ಬಾಕಿ ಗುತ್ತಿಗೆದಾರರಿಂದ ಸಂಗ್ರಹಿಸಿ, ಕಾಂಗ್ರೆಸ್ ಸರಕಾರವು ಪಂಚರಾಜ್ಯ ಚುನಾವಣೆಯ ಖರ್ಚಿಗೆ ಕಲೆಕ್ಷನ್ ಮಾಡುತ್ತಿದ್ದಾರೆ ಎಂಬ ವಿಷಯ ಭಾರಿ ಚರ್ಚೆಯಲ್ಲಿದೆ ಎಂದು ಅವರು ಆರೋಪಿಸಿದರು.
ಕಾಂಗ್ರೆಸ್ ಪಾಲಿಗೆ ಕರ್ನಾಟಕವು ಕಲೆಕ್ಷನ್ ಕೇಂದ್ರವಾಗಿದೆ. ರಾಜ್ಯದಲ್ಲಿ ಬರಕ್ಕೆ ತುತ್ತಾಗಿರುವ ರೈತರಿಗೆ ಪರಿಹಾರ ನೀಡಿಲ್ಲ, ವಿದ್ಯುತ್ ಕಡಿತದಿಂದ ರಾಜ್ಯ ಕತ್ತಲೆಯಲ್ಲಿ ಮುಳುಗಿದೆ, ವರ್ಗಾವಣೆ ದಂಧೆ ವಿಪರೀತವಾಗಿದೆ, ಅಲ್ಪಸಂಖ್ಯಾತರ ತುಷ್ಟಿಕರಣದಲ್ಲಿ ಸರಕಾರ ಮುಳುಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್‌ನ ಎ.ಟಿ.ಎಂ. ಸರಕಾರದ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಅವರು ಆಗ್ರಹಿಸಿದರು.
ರಾಜ್ಯಪಾಲರು
ತಕ್ಷಣ ಮಧ್ಯ ಪ್ರವೇಶಿಸಿ ಸರಕಾರದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ವಿನಂತಿಸಿಕೊಳ್ಳುತ್ತಿದ್ದೇವೆ ಎಂದು ಅವರು ಹೇಳಿದರು.
ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲ ಅಧ್ಯಕ್ಷ ಪಿ.ಜಿ. ಜಗನ್ ನಿವಾಸ ರಾವ್, ಪಕ್ಷದ ಪ್ರಮುಖರಾದ ಪುರುಷೋತ್ತಮ ಮುಂಗ್ಲಿಮನೆ, ನಿತೀಶ್ ಕುಮಾರ್ ಶಾಂತಿವನ, ಜಯಶ್ರೀ ಎಸ್. ಶೆಟ್ಟಿ, ವಿದ್ಯಾ ಗೌರಿ, ವಿಶ್ವೇಶ್ವರ ಭಟ್ ಬಂಗಾರಡ್ಕ, ರಾಧಾಕೃಷ್ಣ ಬೋರ್ಕರ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು