ಪಾಕ್ ಪತ್ರಕರ್ತ ಗೊತ್ತೆ ಇಲ್ಲ ಎಂದ ಹಮೀದ್ ಅನ್ಸಾರಿಗೆ ತಗೊಳ್ಳಿ ಪ್ರೂಫ್ ಎಂದ ಬಿಜೆಪಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪಾಕಿಸ್ತಾನದ ಪತ್ರಕರ್ತ ನುಸ್ರತ್ ಮಿರ್ಜಾ ಅವರ ಬಗ್ಗೆ ತಮಗೆ ಗೊತ್ತೂ ಇಲ್ಲ ಎಂಬ ತಮ್ಮ ಹಿಂದಿನ ಹೇಳಿಕೆಗೆ ಬದ್ಧರಾಗಿರುವುದಾಗಿ ಮಾಜಿ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಶುಕ್ರವಾರ ಪುನರುಚ್ಚರಿಸಿದ್ದಾರೆ.

ತಾವು ಯುಪಿಎ ಸರ್ಕಾರದ ಅವಧಿಯಲ್ಲಿ ಐದು ಬಾರಿ ಭಾರತಕ್ಕೆ ಭೇಟಿ ನೀಡಿದ್ದು, ಇಲ್ಲಿ ಸಂಗ್ರಹಿಸಿದ ಸೂಕ್ಷ್ಮ ಮಾಹಿತಿಗಳನ್ನು ತಮ್ಮ ದೇಶದ ಗುಪ್ತಚರ ಸಂಸ್ಥೆ ಐಎಸ್‌ಐ ಜತೆ ಹಂಚಿಕೊಂಡಿರುವುದಾಗಿ ಪಾಕಿಸ್ತಾನದ ಪತ್ರಕರ್ತ ನುಸ್ರತ್ ಮಿರ್ಜಾ ಹೇಳಿಕೆ ನೀಡಿದ್ದರು. ತಾವು ಅನ್ಸಾರಿ ಅವರ ಆಹ್ವಾನಗಳ ಮೇರೆಗೆ ಭಾರತಕ್ಕೆ ಬಂದಿದ್ದಾಗಿ ಮತ್ತು ಅವರನ್ನು ಭೇಟಿ ಮಾಡಿದ್ದಾಗಿ ಹೇಳಿದ್ದರು ಎನ್ನಲಾಗಿದೆ.

ಆದರೆ ಈ ಆರೋಪಗಳು ಸುಳ್ಳಿನ ಕಂತೆ ಎಂದು ಅನ್ಸಾರಿ ನಿರಾಕರಿಸಿದ್ದಾರೆ. ಆದರೆ ಈ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ.
ಭಯೋತ್ಪಾದನೆ ಕುರಿತು 2009ರಲ್ಲಿ ನಡೆದ ಸಮ್ಮೇಳನದಲ್ಲಿ ಹಮೀದ್ ಅನ್ಸಾರಿ ಮತ್ತು ನುಸ್ರತ್ ಮಿರ್ಜಾ ಅವರು ವೇದಿಕೆ ಹಂಚಿಕೊಂಡಿದ್ದ ಚಿತ್ರವನ್ನು ಬಹಿರಂಗಪಡಿಸಿದೆ.

“ಭಾರತದ ಮಾಜಿ ಉಪ ರಾಷ್ಟ್ರಪತಿ ಅವರು ತಮಗೆ ಪಾಕಿಸ್ತಾನದ ಪತ್ರಕರ್ತ ನುಸ್ರತ್ ಮಿರ್ಜಾ ಅವರು ಗೊತ್ತಿಲ್ಲ ಅಥವಾ ಅವರನ್ನು ಯಾವುದೇ ಸಮ್ಮೇಳನಕ್ಕೂ ಆಹ್ವಾನಿಸಿಲ್ಲ ಎಂಬ ತಮ್ಮ ಹಿಂದಿನ ಹೇಳಿಕೆಗೆ ಬದ್ಧರಾಗಿದ್ದಾರೆ. ನುಸ್ರತ್ ಉಲ್ಲೇಖಿಸಿರುವ 2010ರ ಸಮ್ಮೇಳನ ಅಥವಾ 2009ರ ಭಯೋತ್ಪಾದನೆ ಕುರಿತಾದ ಸಮ್ಮೇಳನ ಅಥವಾ ಯಾವುದೇ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡಿಲ್ಲ” ಎಂದು ಅನ್ಸಾರಿ ಅವರ ಕಚೇರಿ ಹೇಳಿದೆ.


ಇದಕ್ಕೂ ಮುನ್ನ ಸುದ್ದಿಗೋಷ್ಠಿ ನಡೆಸಿದ್ದ ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ, 2009ರಲ್ಲಿ ನಡೆದ ಸಮ್ಮೇಳನದಲ್ಲಿ ಅನ್ಸಾರಿ ಅವರು ಮಿರ್ಜಾ ಜತೆಗೆ ವೇದಿಕೆ ಹಂಚಿಕೊಂಡಿದ್ದರ ಚಿತ್ರ ಬಿಡುಗಡೆ ಮಾಡಿದ್ದರು.

ಪಾಕಿಸ್ತಾನದ ಪತ್ರಕರ್ತ ನುಸ್ರತ್ ಮಿರ್ಜಾ ಅವರ ಸಂದರ್ಶನವು ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅನ್ಸಾರಿ ಅವರು ಭಾಗವಹಿಸಿದ್ದ ಭಯೋತ್ಪಾದನೆ ಕುರಿತಾದ ಸೆಮಿನಾರ್‌ನಲ್ಲಿ ತಾವು ಹಾಜರಿದ್ದುದ್ದಾಗಿ ಅವರು ಹೇಳಿದ್ದರು. ಭಾರತದಲ್ಲಿದ್ದ ಸಂದರ್ಭದಲ್ಲಿ ತಾವು ಸಂಗ್ರಹಿಸಿದ ರಹಸ್ಯ ಮತ್ತು ವರ್ಗೀಕೃತ ಮಾಹಿತಿಗಳನ್ನು ಐಎಸ್‌ಐಗೆ ನೀಡಿದ್ದಾಗಿ ತಿಳಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!