ಪರಿಷತ್ತಿನ ನಾಲ್ಕೂ ಸ್ಥಾನ ಗೆದ್ದು ಮೋದಿಗೆ ಉಡುಗೊರೆ ನೀಡುತ್ತೇವೆ: ಬಿಜೆಪಿ ವಕ್ತಾರ ಮಹೇಶ್

ಹೊಸದಿಗಂತ ವರದಿ, ಮಂಡ್ಯ:
ಪ್ರಸ್ತುತ ನಡೆಯುತ್ತಿರುವ ವಿಧಾನ ಪರಿಷತ್ತಿನ ನಾಲ್ಕೂ ಸ್ಥಾನಗಳನ್ನು ಬಿಜೆಪಿ ಗೆದ್ದು ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಉಡುಗೊರೆ ನೀಡಲಾಗುವುದು ಎಂದು ರಾಜ್ಯ ಬಿಜೆಪಿ ವಕ್ತಾರ ಎಂ.ಜಿ. ಮಹೇಶ್ ತಿಳಿಸಿದರು.
ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಶುಕ್ರವಾರ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಮೂರು ಸ್ಥಾನಗಳನ್ನು ಗೆಲ್ಲುವ ಮೂಲಕ ಬಹುಮತ ಗಳಿಸಿದೆ. ಇದುವರೆವಿಗೂ ರಾಜ್ಯಸಭೆಯಲ್ಲಿ ಸ್ವಂತ ಶಕ್ತಿ ಮೇಲೆ ನಿಲ್ಲಲು ಸಾಧ್ಯವಾಗಿರಲಿಲ್ಲ. ರಾಜ್ಯಸಭೆಯಲ್ಲಿ ಕಾಯಿದೆಗಳು ಅನುಮೋದನೆಗೊಳಿಸುವಲ್ಲಿ ಎನ್‌ಡಿಎ ಸಮರ್ಥತೆ ತೋರಿತ್ತು ಎಂದು ಹೇಳಿದರು.
ರಾಜ್ಯದಲ್ಲೂ ಸಹ ಪರಿಷತ್ತಿನ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ರಾಜ್ಯದ ವಿಧಾನ ಸಭೆಯಲ್ಲಿ ಕೈಗೊಂಡ ನಿರ್ಣಯಗಳಿಗೆ ಮೇಲ್ಮನೆಯಲ್ಲಿ ಅನುಮೋದನೆ ಪಡೆಯಬೇಕಿತ್ತು. ಬಹುಮತವಿಲ್ಲದ ಕಾರಣ ನಿರ್ಣಯಗಳು ತಿರಸ್ಕೃತವಾಗುತ್ತಿದ್ದವು. ಆದರೆ ಈಗ ನಾವು ರಾಜ್ಯಸಭೆ ಮತ್ತು ವಿಧಾನ ಪರಿಷತ್ತು ಎರಡೂ ಸದನಗಳಲ್ಲೂ ಬಹುಮತ ಹೊಂದಿದ್ದೇವೆ. ಇದೀಗ ಕೇಂದ್ರ ಮತ್ತು ರಾಜ್ಯ ಸರ್ಕಾರ ಕೈಗೊಳ್ಳುವ ಪ್ರಮುಖ ನಿರ್ಣಯಗಳು ಅನುಮೋದನೆಗೊಂಡು ಜಾರಿಯಾಗಲಿವೆ ಎಂದು ತಿಳಿಸಿದರು.
ಚುನಾವಣಾ ಅಕ್ರಮ ತಡೆಗೆ ಒತ್ತಾಯ:
ಪ್ರಸ್ತುತ ದಿನಮಾನಗಳಲ್ಲಿ ಬಿಜೆಪಿಗೆ ಜನಬೆಂಬಲ ಹೆಚ್ಚುತ್ತಿರುವುದನ್ನು ಸಹಿಸದ ವಿರೋಧಿಗಳು ಚುನಾವಣಾ ಅಕ್ರಮಕ್ಕೆ ಮುಂದಾಗಿವೆ. ಮತದಾರರಿಗೆ ಹಣ ಹಂಚುವುದು ಸೇರಿದಂತೆ ಬೇರೆ ಬೇರೆ ಆಮಿಷಗಳನ್ನು ಒಡ್ಡುತ್ತಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗ ಕಠಿಣ ಕ್ರಮ ಕೈಗೊಳ್ಳಬೇಕು. ಚುನಾವಣಾ ಅಕ್ರಮಗಳನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!