ಬಿಜೆಪಿ ಪ್ರಾದೇಶಿಕ ಪಕ್ಷಗಳನ್ನು ಮುಳುಗಿಸಲು ಹವಣಿಸುತ್ತಿದೆ; ಹರಿಹಾಯ್ದ ಹೆಚ್‌ಡಿಕೆ

ಹೊಸದಿಗಂತ ವರದಿ, ಶಿವಮೊಗ್ಗ:
ಯಾವ ರಾಜ್ಯಗಳಲ್ಲಿಯೂ ವಿರೋಧ ಪಕ್ಷಗಳೇ ಇರಬಾರದೆಂಬ ಉದ್ದೇಶವನ್ನು ಬಿಜೆಪಿ ಹೊಂದಿದ್ದು, ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಮುಗಿಸಿದ್ದಾಯಿತು. ಈಗ ಪ್ರಾದೇಶಿಕಾ ಪಕ್ಷಗಳನ್ನು ಮುಳುಗಿಸಲು ಹವಣಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿದ ಅವರು, ಮಾಧ್ಯಮಗಳೊಂದಿಗೆ ಮಾತನಾಡಿ, ಈ ಹಿಂದೆ ಕರ್ನಾಟಕಲ್ಲಿದ್ದ ಸಮ್ಮಿಶ್ರ ಸರ್ಕಾರವನ್ನು ಮುಗಿಸಿತ್ತು. ಈಗ ಮಹಾರಾಷ್ಟ್ರದಲ್ಲಿ ಶಿವಸೇನೆ ನೇತೃತ್ವದ ಸರ್ಕಾರವರನ್ನು ಮುಗಿಸಲು ಹೊರಟಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರಿಗೆ ಇಡಿ ಮೂಲಕ ನೋಟೀಸ್ ಕೊಟ್ಟು ಹಣಿಯಲು ಯತ್ನಿಸಲಾಗುತ್ತಿದೆ ಎಂದು ಹೇಳಿದರು.
ರಾಜಸ್ಥಾನದಲ್ಲಿ ಇದೇ ತಂತ್ರ ಮಾಡಲು ಯತ್ನಿಸಲಾಯಿತಾದರೂ ಅದು ಸಾಧ್ಯವಾಗಿಲ್ಲ. ಜಾರ್ಖಂಡ್‌ನಲ್ಲಿಯೂ ಇದೇ ರೀತಿ ಮಾಡಲಾಗಿದೆ. ಒಟ್ಟಿನಲ್ಲಿ ಯಾವ ರಾಜ್ಯಗಳಲ್ಲಿಯೂ ವಿರೋಧ ಪಕ್ಷಗಳು ಇರಬಾರದೆಂಬ ಮನಸ್ಥಿತಿಯಲ್ಲಿ ಬಿಜೆಪಿ ನಾಯಕರಿದ್ದಾರೆ. ಒಂದೆಡೆ ಉಪದೇಶ ಮಾಡುತ್ತಾ ಇನ್ನೊಂದು ಕಡೆ ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸಲಾಗುತ್ತಿದೆ. ಹೀಗಾಗಿ ಚುನಾವಣೆಯೇ ಬೇಡ ತಮ್ಮ ಪಕ್ಷವೇ ಎಲ್ಲಾ ಕಡೆ ಆಡಳಿತ ನಡೆಸಲಿದೆ ಎಂದು ಲೋಕಸಭೆಯಲ್ಲಿ ಬಿಲ್ ಪಾಸ್ ಮಾಡಿ ಎಂದು ಹರಿಹಾಯ್ದರು.
ಮತ್ತೆ ಅಧಿಕಾರಕ್ಕೆರುತ್ತೇವೆ:
2023ರ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಎಲ್ಲಾ ಯತ್ನ ಮಾಡಲಾಗುತ್ತಿದೆ. ಇದಕ್ಕಾಗಿ ಪಂಚರತ್ನ ಕಾರ್ಯಕ್ರಮ ರೂಪಿಸಲಾಗಿದೆ. ರಾಜ್ಯದ 150 ವಿಧಾನ ಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ವಾಸ್ತವ್ಯ ಮಾಡಲಾಗುತ್ತದೆ. ಯಾರು ಪಕ್ಷ ಬಿಟ್ಟರೂ ಕಾರ್ಯಕರ್ತರು ಇದ್ದಾರೆ. ಅವರೇ ಪಕ್ಷ ಕಟ್ಟಿ ಬೆಳೆಸಿ ಅಧಿಕಾರಕ್ಕೆ ತರಲಿದ್ದಾರೆ ಎಂದರು.
ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಮಳೆಯಿಂದ ಮನೆ ಕಳೆದುಕೊಂಡವರಿಗೆ ಇದುವರೆಗೂ ಸೂರು ಕಲ್ಪಿಸಿಲ್ಲ. ಬಡವರ ಪರವಾಗಿ ಯಾವುದೇ ಕಾರ್ಯಕ್ರಮಗಳನ್ನು ರೂಪಿಸಿಲ್ಲ. ಬಡವರು ಗೂಡಾಂಗಡಿ ಹಾಕಿ ವ್ಯವಹಾರ ನಡೆಸಲು ಆಗುತ್ತಿಲ್ಲ. ಅವರಿಗೆ ನೆರವಾಗುವ ನಿಟ್ಟಿನಲ್ಲಿ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ವಿಶ್ವಾಸವಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!