ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ವರದಿ, ಮಂಡ್ಯ:
ಭಾರತೀಯ ಜನತಾ ಪಾರ್ಟಿ ವತಿಯಿಂದ ಸೆ. 17ರಿಂದ ಅ. 7ರವರೆಗೆ ಸೇವೆ ಮತ್ತು ಸಮರ್ಪಣೆ ಅಭಿಯಾನ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜೆ. ವಿಜಯಕುಮಾರ್ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ, ಪ್ರಧಾನಿಯಾಗಿ 20 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಡೀ ರಾಷ್ಟ್ರದಾದ್ಯಂತ 20ನೇ ವಾರ್ಷಿಕೋತ್ಸವದ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಈ ವರ್ಷ ಎರಡು ಪ್ರಮುಖ ದಿನಗಳಂದು ವಿಶಿಷ್ಟ ಸಂಗಮವಿರುವುದರಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ ಅವರ ನೇತೃತ್ವದಲ್ಲಿ ಸೇವ ಹಾಗೂ ಸಮರ್ಪಣೆ ಅಭಿಯಾನ ನಡೆಯಲಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಜೀವನ ಮತ್ತು ಸಾಧನೆಗಳ ಕುರಿತು ನಮೋ ಆ್ಯಪ್ನಲ್ಲಿ ವರ್ಚುವಲ್ ಪ್ರದರ್ಶನದ ಮೂಲಕ ಜನರಿಗೆ ಮಾಹಿತಿ ನೀಡುವುದು. ದಿವ್ಯಾಂಗರಿಗೆ ನೆರವು ಮತ್ತು ಉಪಯುಕ್ತ ಸಲಕರಣೆ, ಜಿಲ್ಲಾ ಮಟ್ಟದಲ್ಲಿ ಆರೋಗ್ಯ ತಪಾಸಣಾ ಶಿಬಿರ, ಸ್ಲಂಗಳು, ಅನಾಥಾಶ್ರಮಗಳು, ಆಸ್ಪತ್ರೆಗಳು ಮತ್ತು ವೃದ್ಧಾಶ್ರಮಗಳಲ್ಲಿ ಹಣ್ಣು ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯ ಲಾನುಭವಿಗಳಿಗೆ ಪ್ರತೀ ಬೂತ್ನಲ್ಲಿ ಉಚಿತ ಪಡಿತರ ಚೀಲಗಳ ವಿತರಣೆ, ಪಡಿತರ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ, ಯುವ ಮೋರ್ಚಾ ತಂಡಗಳಿಂದ ರಕ್ತದಾನ ಶಿಬಿರ, ಏಕ ಬಳಕೆಯ ಪ್ಲಾಸ್ಟಿಕ್ನ್ನು ಬಳಸದಂತೆ ಕಾರ್ಯಕರ್ತರು, ಜನಸಾಮಾನ್ಯರಿಂದ ಪ್ರತಿಜ್ಞೆ ಸ್ವೀಕಾರ, ಚುನಾಯಿತ ಪ್ರತಿನಿಧಿಗಳು ಮತ್ತು ಪದಾಧಿಕಾರಿಗಳೊಂದಿಗೆ ಲಸಿಕಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ, ಅ. 2ರಂದು ಗಾಂಧಿ ಜಯಂತಿಯಂದು ಸ್ವಚ್ಚತಾ ಅಭಿಯಾನ, ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್, ನಮಾಮಿ ಗಂಗೆ ಯೋಜನೆಯನ್ವಯ ಕಾವೇರಿ ಹಾಗೂ ಹೇಮಾವತಿ ನದಿ ಸ್ವಚ್ಚತೆ, ಸ್ವಾತಂತ್ರ ಅಮೃತ ಮಹೋತ್ಸವದ ಅಂಗವಾಗಿ ರಾಷ್ಟ್ರ ನಿರ್ಮಾಣದಲ್ಲಿ ನಿಮ್ಮ ಕೊಡುಗೆ ಏನು ಎಂಬುದರ ಕುರಿತು ಉಪನ್ಯಾಸ ಸೇರಿದಂತೆ 20 ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.