ಅಲ್ಪಸಂಖ್ಯಾತರು, ದಲಿತರನ್ನು ಕೇಂದ್ರೀಕರಿಸಿ ಬಿಜೆಪಿ ಬೃಹತ್‌ ಪ್ರಚಾರಾಂದೋಲನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಸಮಾಜದ ಎಲ್ಲಾ ವರ್ಗಗಳನ್ನು ತಲುಪುವ ಉದ್ದೇಶದಿಂದ ಬಿಜೆಪಿ ಮೇ 30ರಿಂದ ಹದಿನೈದು ದಿನಗಳ ಬೃಹತ್ ಪ್ರಚಾರ ಅಭಿಯಾನವನ್ನು ನಡೆಸಲಿದೆ. ಪ್ರಧಾನಿ ಮೋದಿ ಸರ್ಕಾರಕ್ಕೆ 8 ವರ್ಷ ಪೂರ್ಣಗೊಳ್ಳುತ್ತಿರುವ ಪ್ರಯುಕ್ತ ಈ ಪ್ರಚಾರಾಂದೋಲನ ಆಯೋಜಿಸಲಾಗಿದ್ದು, ಮೋದಿಯವರ ಆಡಳಿತ ಅವಧಿಯಲ್ಲಿ ದೇಶ ಸಾಧಿಸಿರುವ ಅಮೂಲಾಗ್ರ ಬೆಳವಣಿಗಳ ಕುರಿತಾಗಿ ವಿಶೇಷವಾಗಿ ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಜನರಿಗೆ ಮನವರಿಕೆ ಮಾಡಿಕೊಡಲು ಬಿಜೆಪಿ ಯೋಜಿಸಿದೆ.
ಎಲ್ಲಾ ಸಮುದಾಯದ ಜನರನ್ನು ಪಕ್ಷ ತಲುಪಬೇಕು ಎಂಬ ಉದ್ದೇಶದಿಂದ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದರು, ಶಾಸಕರು ಸೇರಿದಂತೆ ಪಕ್ಷದ ಚುನಾಯಿತ ಪ್ರತಿನಿಧಿಗಳು ಸಾರ್ವಜನಿಕ ಬಹಿರಂಗ ಪ್ರಚಾರ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ದೇಶಾದ್ಯಂತ ರ್ಯಾಲಿಗಳು ಮತ್ತು ‘ಪ್ರಭಾತ್ ಪೇರಿ’ ಆಯೋಜಿಸಲಾಗುವುದು. ಜೊತೆಗೆ ಮೋದಿಯವರ ಸರ್ಕಾರದ ಸಾಧನೆಗಳ ವಿವರವಿರುವ ಕರಪತ್ರಗಳನ್ನು ಹಂಚಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.
ʼ8 ವರ್ಷಗಳು: ಜನಸೇವೆ, ಉತ್ತಮ ಆಡಳಿತ ಮತ್ತು ಬಡವರ ಕಲ್ಯಾಣ’ ಎಂದು ಪ್ರಚಾರಾದೋಲನಕ್ಕೆ ಹೆಸರು ನೀಡಲಾಗಿದೆ. ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಮೇ 30 ರಂದು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ‘ಎ ರಿಪೋರ್ಟ್ ಟು ದಿ ನೇಷನ್’ ಎಂಬ ಪುಸ್ತಕವನ್ನು ಬಿಡುಗಡೆ ಮಾಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಗುವುದು. ಕೇಂದ್ರ ಸಚಿವರು ಸೇರಿದಂತೆ ಪಕ್ಷದ ಪ್ರಮುಖರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಇದರ ಬಳಿಕ 1೫ ದಿನಗಳ ಕಾಲ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮ ನಡೆಯಲಿದೆ. ರೈತರು, ಮಹಿಳೆಯರು, ಎಸ್‌ಸಿ, ಎಸ್‌ಟಿ, ಒಬಿಸಿ, ದುರ್ಬಲ ವರ್ಗಗಳು, ನಗರ ಬಡವರು, ಅಲ್ಪಸಂಖ್ಯಾತರು ಮತ್ತು ಬುಡಕಟ್ಟು ಜನಾಂಗದವರನ್ನು ಕೇಂದ್ರೀಕರಿಸಿ ಕಾರ್ಯಕ್ರಮಗಳನ್ನು ರೂಪುಗೊಳಿಸಲಾಗಿದೆ.
ಜೂನ್ 6 ರಿಂದ 8 ರವರೆಗೆ ನಡೆಯಲಿರುವ ‘ಅಲ್ಪಸಂಖ್ಯಾತರೊಂದಿಗೆ ಸಂವಹನ’. ಕಾರ್ಯಕ್ರಮದಲ್ಲಿ ಬಿಜೆಪಿಯ ಅಲ್ಪಸಂಖ್ಯಾತ ಕೋಶದ ಸದಸ್ಯರು ಅಲ್ಪಸಂಖ್ಯಾತ ಸಮುದಾಯಗಳ ಜನರನ್ನು ಭೇಟಿ ಮಾಡುತ್ತಾರೆ. ಈ ವೇಳೆ ಮೋದಿ ಸರ್ಕಾರವು ಕೈಗೊಂಡ ಸಮುದಾಯ-ನಿರ್ದಿಷ್ಟ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಅವರಿಗೆ ತಿಳಿಸಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!