ಸಚಿವ ಅಶ್ವಥ್ ನಾರಾಯಣ್ ಅವರ ಭಾಷಣಕ್ಕೆ ಅಡ್ಡಿ: ಡಿ.ಕೆ.ಸುರೇಶ್, ರವಿ ವಿರುದ್ಧ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರ ಆಕ್ರೋಶ

ಹೊಸದಿಗಂತ ವರದಿ, ಚಿಕ್ಕಮಗಳೂರು:

ಚಿಕ್ಕಮಗಳೂರು: ರಾಮನಗರದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಸಂಸದ ಡಿ.ಕೆ.ಸುರೇಶ್, ಕಾಂಗ್ರೆಸ್ ಎಂಎಲ್ಸಿ ರವಿ ಅವರು ಸಚಿವ ಅಶ್ವಥ್ ನಾರಾಯಣ್ ಅವರ ಭಾಷಣಕ್ಕೆ ಅಡ್ಡಿ ಪಡಿಸಿ, ಗೂಂಡಾ ವರ್ತನೆ ತೋರಿದ್ದಾರೆಂದು ಆರೋಪಿಸಿ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಆಜಾದ್ ವೃತ್ತದಲ್ಲಿ ಡಿ.ಕೆ.ಸುರೇಶ್ ಅವರ ಭಾವಚಿತ್ರವನ್ನು ಧಹಿಸಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು, ಡಿ.ಕೆ.ಸುರೇಶ್ ಹಾಗೂ ರವಿ ಇಬ್ಬರನ್ನೂ ಬಂಧಿಸಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಸರ್ಕಾರಿ ಕಾರ್ಯಕ್ರಮದಲ್ಲಿ ಹೇಗೆ ನಡೆದುಕೊಳ್ಳಬೇಕು ಎನ್ನುವುದು ಗೊತ್ತಿಲ್ಲ ಎಂದು ಆರೋಪಿಸಿದರು.
ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂದೀಪ್ ಹರವಿನಗಂಡಿ ಮಾತನಾಡಿ, ಉನ್ನತ ಶಿಕ್ಷಣ ಸಚಿವ ಆಶ್ವಥ್ ನಾರಾಯಣ್ ಅವರನ್ನು ಡಿ.ಕೆ.ಸುರೇಶ್ ಅವಹೇಳನ ಮಾಡಿದ್ದಾರೆ. ಎಂಎಲ್ಸಿ ರವಿ ಮೈಕ್ ಕಿತ್ತು ಅಸಭ್ಯವಾಗಿ ವರ್ತಿಸಿದ್ದಾರೆ. ಡಿ.ಕೆ.ಶಿವಕುಮಾರ್ ಹಾಗೂ ಅವರ ಸಹೋದರ ಡಿ.ಕೆ.ಸುರೇಶ್ ಮತ್ತು ಅವರ ಬೆಂಬಲಿಗರು ರೌಡಿ ಗ್ಯಾಂಗ್‌ನ ಪಡ್ಡೆಗಳು ಎನ್ನುವುದು ರಾಜ್ಯದ ಪ್ರತಿಯೊಬ್ಬರಿಗೂ ಗೊತ್ತಿದೆ ಮುಂದೆ ಜನ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು.
ರಾಮನಗರ ಜಿಲ್ಲೆಯ ಅಭಿವೃದ್ಧಿಗೆ ನಮ್ಮ ಮುಖ್ಯಮಂತ್ರಿಗಳು, ಸರ್ಕಾರ ಪಣತೊಟ್ಟಿದೆ. ರಾಜ್ಯ ಹಾಗೂ ಕೇಂದ್ರದ ಅಭಿವೃದ್ಧಿ ಕೆಲಸಗಳನ್ನು ಸಹಿಸದೆ ಈ ರೀತಿ ಗೂಂಡಾಗಿರಿ ಮಾಡಿದ್ದಾರೆ ಇದನ್ನು ಯುವ ಮೋರ್ಚಾ ಖಂಡಿಸುತ್ತದೆ ಎಂದರು.
ಬಿಜೆಪಿ ಜಿಲ್ಲಾ ವಕ್ತಾರ ವರಸಿದ್ಧಿ ವೇಣುಗೋಪಾಲ್ ಮಾತನಾಡಿ, ಗೂಂಡಾ ವರ್ತನೆ ತೋರಿ ಮುಖ್ಯಮಂತ್ರಿಗಳು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಸಚಿವರಿಗೆ ಬೆದರಿಕೆ ಹಾಕಿ, ಸರ್ಕಾರಿ ಸಮಾರಂಭಕ್ಕೆ ಅಡ್ಡಿ ಪಡಿಸಿರುವ ಸಂಸದ ಡಿ.ಕೆ.ಸುರೇಶ್ ಮತ್ತು ಅವರ ಬೆಂಬಲಿಗರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಡಿ.ಕೆ.ಸುರೇಶ್ ಮತ್ತು ಎಂಎಲ್ಸಿ ರವಿ ಇಬ್ಬರ ವಿರುದ್ಧವೂ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಮುಂದೆ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಿಗೆ ಅವರನ್ನು ಆಹ್ವಾನಿಸದೆ ಬಹಿಷ್ಕರಿಸಬೇಕು. ಮುಂದೆ ಇದೇ ರೀತಿ ವರ್ತನೆ ಮುಂದುವರಿದಲ್ಲಿ ರಾಜ್ಯವಾಪ್ತಿ ಅವರ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಕೋಟ್ಯಾನ್, ಆಶ್ರಯ ಸಮಿತಿ ಅಧ್ಯಕ್ಷ ನಾರಾಯಣ ಸ್ವಾಮಿ, ನಗರಸಭೆ ಸದಸ್ಯ ಕುಮಾರ್, ಮುಖಂಡರುಗಳಾದ ಶಶಿ ಆಲ್ದೂರು, ಬಸವರಾಜ್, ಜಯರಾಂ ಇತರರು ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!